ಹಾಸನ.ಜೂ.26:- ಹಾಸನ ತಾಲ್ಲೂಕಿನ ಹೊನ್ನಾವರ ಗ್ರಾಮಪಂಚಾಯತ್ ವ್ಯಾಪ್ತಿಯ ಅನುಗವಳ್ಳಿಯ ಬೃಹತ್ ಐತಿಹಾಸಿಕ ಕಲ್ಯಾಣಿಯ ಮರು ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಹಸಿರುಭೂಮಿ ಪ್ರತಿಷ್ಠಾನದ ಪ್ರೇರಣೆಯಿಂದ ಗ್ರಾಮಸ್ಥರು, ಪಂಚಾಯತ್ ಸಿಬ್ಬಂದಿ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರಮದಾನದಲ್ಲಿ ತೊಡಗಿಕೊಳ್ಳುವ ಮೂಲಕ ಉತ್ಸಾಹದಿಂದ ಕೆಲಸ ಪ್ರಾರಂಭವಾಗಿದೆ.
ಕೆಲಸದ ನೇತೃತ್ವ ವಹಿಸಿಕೊಂಡಿರುವ ಪಿ.ಡಿ.ಓ ನಾಗಮೀನಾಕ್ಷಿಯವರು, ಅಂತರ್ಜಲದ ಒರತೆ ಕಾಣುವವರೆಗೂ ಹೂಳೆತ್ತುವುದಾಗಿಯೂ ಹಾಗೂ ಕಲ್ಯಾಣಿ ಸುತ್ತಲ ಗುಂಡುತೋಪಿನಲ್ಲಿ ಅಂದಾಜು ನೂರು ಗಿಡಗಳನ್ನು ಬೆಳೆಯಬಹುದಾಗಿದ್ದು, ಊರ ಹಿರಿಯರೊಂದಿಗೆ ಮಾತನಾಡಿ ಬೇಲಿ ವ್ಯವಸ್ಥೆ ಮಾಡಿಸಿ, ಗಿಡ ನೆಡಿಸಿ ತೋಪು ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಕೆಲಸಕ್ಕೆ ಪ್ರೇರಣೆ ನೀಡಿದ ಹಸಿರುಭೂಮಿ ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿಗಳಾದ ಡಾ. ಮಂಜುನಾಥ್ ಮತ್ತು ಚಿನ್ನೇನಹಳ್ಳಿ ಸ್ವಾಮಿ ಟ್ರಸ್ಟಿಗಳಾದ ವೆಂಕಟೇಗೌಡರು, ರೂಪಹಾಸನ, ಪುಟ್ಟಯ್ಯ, ಅಧ್ಯಕ್ಷರಾದ ಅಪ್ಪಾಜಿಗೌಡ ಶ್ರಮದಾನ, ದಾಖಲೀಕರಣ, ಮಾರ್ಗದರ್ಶನಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ಊರಿನವರೆಲ್ಲರ ಸಹಕಾರ ಮತ್ತು ಒಗ್ಗಟ್ಟು ಗಮನಾರ್ಹವಾಗಿತ್ತು.
ನಿಟ್ಟೂರು ಪಿ.ಡಿ.ಓ ಮಲ್ಲೇಶಪ್ಪ, ಗ್ರಾಮಪಂಚಾಯತ್ ಅಧ್ಯಕ್ಷರಾದ ಪಿ.ಎಂ. ಶಿವಸ್ವಾಮಿ, ಸದಸ್ಯರಾದ ಸುಮ, ತಾಲ್ಲೂಕು ಪಂಚಾಯತ್ ಸದಸ್ಯರಾದ ಭಾಗ್ಯ, ಮಹಿಳಾ ಸ್ವಸಹಾಯ ಸಂಘದ ಮುಖ್ಯಸ್ಥರಾದ ವಾಣಿ, ಅಶ್ವಿನಿ, ಮಮತ, ಮಂಜುಳಾ ಮುಂತಾದವರು ಜನಸಂಘಟನೆ ಮಾಡಿ ಶ್ರಮದಾನದಲ್ಲಿ ಪಾಲ್ಗೊಂಡರು.
ಕಲ್ಯಾಣಿ ಸುತ್ತಲಿನ ಗಿಡ ಗಂಟಿಗಳನ್ನು ಕಡಿದು, ಕಳೆ ಕಿತ್ತು ಸ್ವಚ್ಛಗೊಳಿಸಲಾಯ್ತು. 30 ವರ್ಷಗಳಿಂದ ಹೂಳು ಎತ್ತಿಲ್ಲದ್ದರಿಂದ ಈ ಬಾರಿ ಜಲದ ಕಣ್ಣು ಕಾಣುವವರೆಗೆ ಹೂಳು ತೆಗೆಯುವುದಾಗಿ ಜನರು ತಿಳಿಸಿದರು.
ಕಲ್ಯಾಣಿ ಮಧ್ಯದಲ್ಲಿ ಶಿವಲಿಂಗವಿದ್ದು ಎಚ್ಚರಿಕೆಯಿಂದ ಸುತ್ತಲ ಭಾಗದಲ್ಲಿ ಚುರುಕಿನಿಂದ ಕೆಲಸವನ್ನು ಮುಂದುವರೆಸಲಾಯ್ತು. ಶ್ರಮದಾನದಲ್ಲಿ ಭಾಗಿಗಳಾದವರಿಗೆಲ್ಲ ಹಸಿರುಭೂಮಿ ಪ್ರತಿಷ್ಠಾನದ ವತಿಯಿಂದ ಮಾಸ್ಕ್ ಗಳನ್ನು ವಿತರಿಸಲಾಯಿತು.
Tags
ಹಾಸನ