ಹಾಸನ: ಜಿಲ್ಲೆಯ ಅಭಿವೃದ್ಧಿ ಬಗ್ಗೆ ಜೆಡಿಎಸ್ ಶಾಸಕರೆಲ್ಲಾ ಸೇರಿ ಸಭೆ ನಡೆಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗುವುದು. ಏನಾದರೂ ಸ್ಪಂದಿಸದಿದರೇ ಶಾಂತಿಯುತ ಹೋರಾಟ ನಡೆಸುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇಂದು ಕೊರೋನಾ ಎಂಬ ಮಹಾಮಾರಿ ಆವರಿಸಿ ಜನರು ತತ್ತರಿಸಿಹೋಗಿದ್ದಾರೆ. ಯಾವ ಅಭಿವೃದ್ಧಿ ಕೆಲಸ ಕಾರ್ಯಗಳು ಸಾಗುತ್ತಿಲ್ಲ. ಕೇವಲ ಧ್ವೇಷದ ರಾಜಕಾರಣ ಮಾಡಿದರೇ ಜನತೆ ಏನು ಮಾಡಬೇಕು. ಈ ಬಗ್ಗೆ ಜೆಡಿಎಸ್ ಪಕ್ಷದ ಶಾಸಕರೆಲ್ಲಾ ಸೇರಿ ಒಂದು ಸಭೆ ನಡೆಸಿ ತೀರ್ಮಾನವನ್ನು ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು ಎಂದರು. ಸ್ಪಂದಿಸದಿದ್ದರೆ ದೇವೇಗೌಡರೊಂದಿಗೆ ಶಾಂತಿಯಿಂದ ಹೋರಾಟ ಮಾಡಬೇಕಾಗುತ್ತದೆ.
ಇದುವರೆಗೂ ತಾಳ್ಮೆಯಿಂದ ಹನ್ನೆರಡು ತಿಂಗಳು ಕಾದಿದ್ದೇವೆ. ಆದರೇ ಜೆಡಿಎಸ್ ಶಾಸಕರು ಸುಮ್ಮನಿದ್ದಾರೆ ಎಂದು ಭಾವಿಸುವುದು ಸರಿಯಲ್ಲ. ದ್ವೇಷದ ರಾಜಕಾರಣ ಮುಂದುವರೆದರೆ ಹೋರಾಟ ಅನಿವಾರ್ಯವಾಗುತ್ತದೆ. ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಮಯ ಬಂದಾಗ ಎಳೆಎಳೆಯಾಗಿ ಮುಂದೆ ತಿಳಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.
ಶಾಸಕರ ಅನುದಾನ ಇನ್ನು ಬಿಡುಗಡೆ ಮಾಡಿರುವುದಿಲ್ಲ. ಇಪ್ಪತ್ತು ದಿನ ಕಳೆದರು ರೈತರಿಗೆ ಪಹಣಿ ಸಿಗುತ್ತಿಲ್ಲ.
ಈ ಸರ್ಕಾರದಲ್ಲಿ ಹೇಳೋರು, ಕೇಳೋರು ಇಲ್ಲದಂತಾಗಿದೆ, ಭೂ ಸುಧಾರಣಾ ಕಾಯ್ದೆ ಜಾರಿಗೊಳಿಸುವ ಅಗತ್ಯವಿರಲಿಲ್ಲ. ನಾವು ಸುಮ್ಮನೆ ಕೂರುವುದಿಲ್ಲ ದೇವೇಗೌಡರ ನೇತೃತ್ವದಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇವೆ,
ಕೂಡಲೇ ಭೂಸುಧಾರಣಾ ಕಾಯ್ದೆ ರದ್ದು ಮಾಡಬೇಕು ಎಂದರು. ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ ನಡೆಯುತ್ತಿದೆ. ಹಾಸನ-ಬೇಲೂರು-ಚಿಕ್ಕಮಗಳೂರು ರೈಲ್ವೆ ಮಾರ್ಗ, ವಿಮಾನ ನಿಲ್ದಾಣ ಸೇರಿದಂತೆ ಯಾವ ಕಾಮಗಾರಿಗಳು ಆರಂಭಗೊಂಡಿರುವುದಿಲ್ಲ. ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳು, ದ್ವೇಷದ ರಾಜಕಾರಣದ ಬಗ್ಗೆ ಪತ್ರಿಕೆಗಳಲ್ಲಿ ಜಾಹಿರಾತು ನೀಡಬೇಕಾಗುತ್ತದೆ ಎಂದು ಟಾಂಗ್ ನೀಡಿದರು.
ಜುಲೈ ತಿಂಗಳು ಕಳೆದರೂ ಯಾವ ನಾಲೆಗಳಿಗೆ ನೀರು ಬಿಟ್ಟಿಲ್ಲ, ಸರ್ಕಾರ ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು, ಹನ್ನೆರಡು ತಿಂಗಳಿಂದ ಯಾವುದೇ ಹೊಸ ನೀರಾವರಿ ಯೋಜನೆ ಆರಂಭಿಸಿಲ್ಲ,
ಕೊರೊನದಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವುದಾಗಿ ಆತಂಕವ್ಯಕ್ತಪಡಿಸಿದರು.
Tags
ಹಾಸನ