ಹಾಸನ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದ್ದರೂ,
ಕೊರೊನಾ ಕಾರಣದಿಂದ ವಿಳಂಬವಾಗಿದ್ದ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಆಯ್ಕೆ ಸದ್ದಿಲ್ಲದೇ ನಡೆದು ಹೋಗಿದೆ.
ತಾಲೂಕಿನ ಸೀಗೆ ಮೂಲದವರಾದ ಲಲಾಟ ಮೂರ್ತಿ ಅಲಿಯಾಸ್ ಸೀಗೆ ಮೂರ್ತಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಸಂಬಂಧ ಜುಲೈ 1 ರಂದು ಆದೇಶ ಹೊರಡಿಸಿರುವ ನಗರಾಭಿವೃದ್ಧಿ ಪ್ರಾಧಿಕಾರದ ಅಧೀನ ಕಾರ್ಯದರ್ಶಿ ಸಿ.ಎಸ್.ಶಿವಕುಮಾರಸ್ವಾಮಿ, ಐವರು ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಮೂರ್ತಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಇವರ ಅಧಿಕಾರಾವಧಿ ಮುಂದಿನ 3 ವರ್ಷಗಳ ವರೆಗೆ ಅಥವಾ ಮುಂದಿನ ಆದೇಶದವರೆಗೆ ಮುಂದುವರಿಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಧ್ಯಕ್ಷರ ಜೊತೆಯಲ್ಲಿ ಅಶೋಕ್ ಕುಮಾರ್ ಡಿ.ಆರ್. ಶರತ್ ಡಿ.ಕೆ. ಸುಶೀಲಾ ಅಣ್ಣಪ್ಪ, ಕೃಷ್ಣಕುಮಾರ್ ಮತ್ತು ಯಶವಂತ್ ಹೆಚ್.ಎಂ. ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಹುಡಾ ಅಧ್ಯಕ್ಷರಾಗಲು ಹಲವು ಪೈಪೋಟಿ ನಡೆಸಿದ್ದರು.
ಹಾಸನ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಶಾಸಕರಿರುವುದರಿಂದ ಹೊರಗಿನವರಿಗೆ ಅವಕಾಶ ಮಾಡಿಕೊಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಕಂಚಮಾರನಹಳ್ಳಿ ಲಕ್ಷ್ಮಿಕಾಂತ್, ಬಿಟ್ಟಗೋಡನಹಳ್ಳಿ ಮೊಗಣ್ಣಗೌಡ ಸೇರಿದಂತೆ ಹಲವರು ಪೈಪೋಟಿಯಲ್ಲಿದ್ದರು. ಆದರೆ ಬೇರೆ ಬೇಡಿಕೆಗೂ ಸೊಪ್ಪು ಹಾಕದ ಸರ್ಕಾರ, ಅಂತಿಮವಾಗಿ ಹಾಸನ ವಿಧಾನಸಭಾ ಕ್ಷೇತ್ರದವರೇ ಆಗಿರುವ ಮೂರ್ತಿ ಅವರಿಗೆ ಮಣೆ ಹಾಕಿದೆ.
Tags
ಹಾಸನ