ಸೆಪ್ಟಂಬರ್ 5 ರಂದು ನಡೆಯುವ ಶಿಕ್ಷಕರ ದಿನಾಚರಣೆಯನ್ನು ಸರ್ಕಾರದ ಆದೇಶದಂತೆ ಸರಳವಾಗಿ ಮತ್ತು ಸುರಕ್ಷಿತವಾಗಿ ನಡೆಸಲು ಅಗತ್ಯ ಪೂರ್ವ ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಕವಿತ ರಾಜರಾಂ ಅವರು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಶಿಕ್ಷಕರ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಬಾರಿ ಶಿಕ್ಷಕರ ದಿನಾಚರಣೆಯನ್ನು ನಗರದ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ನಡೆಸಲು ತೀರ್ಮಾನಿಸಿದ್ದು, ಸ್ಥಳಾವಕಾಶ ಹಾಗೂ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಸರಿಯಾದ ರೀತಿಯಲ್ಲಿ ಮಾಡುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಸರಳವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಬೇಕು ಹಾಗೂ ನಿವೃತ್ತ ಶಿಕ್ಷಕರಿಗೆ ಪ್ರತಿ ವರ್ಷ ನೀಡುವಂತೆ ಈ ಬಾರಿಯೂ ಅವರಿಗೆ ಸಂಬಂಧಿಸಿದ ತಾಲ್ಲೂಕುಗಳಲ್ಲಿಯೇ ಗೌರವ ಪ್ರಶಸ್ತಿ ಪ್ರಾಧಾನ ಮತ್ತು ಸನ್ಮಾನ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿಯವರು ಸೂಚಿಸಿದರು.
ಹಾಸನ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಒಟ್ಟು 80 ಜನ ನಿವೃತ್ತ ಶಿಕ್ಷಕರಿದ್ದು, ಅವರೊಂದಿಗೆ ಉತ್ತಮ ಶಿಕ್ಷಕರೆಂದು ಪ್ರತಿ ತಾಲ್ಲೂಕಿನಿಂದ ಮೂರು ಜನ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡುವುದರ ಜೊತೆಗೆ ತಾಲ್ಲೂಕಿಗೆ ಒಬ್ಬರಂತೆ ಖಾಸಗಿ ಶಾಲೆಯ ಶಿಕ್ಷಕರನ್ನು ಗುರುತಿಸಿ ಅವರಿಗೂ ಪ್ರಶಸ್ತಿ ಹಾಗೂ ಸನ್ಮಾನ ಪ್ರಧಾನ ಮಾಡುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ಮಕ್ಕಳ ಜ್ಞಾನವನ್ನು ವೃದ್ಧಿಪಡಿಸುವಲ್ಲಿ ಶಿಕ್ಷಕರ ಪಾತ್ರ ಹೆಚ್ಚಾಗಿದೆ. ಅಂಕಗಳಿಕೆಗಾಗಿ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವ ಬದಲು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ಮಾಡುವಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಅವರು ಹೆಳಿದರು.
ಖಾಸಗಿ ಶಾಲೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮಾತನಾಡಿ ಖಾಸಗಿ ಶಾಲೆಯ ಶಿಕ್ಷಕರು ಶ್ರಮವಹಿಸಿ ಕೆಲಸ ಮಾಡುವುದರಿಂದ ತಾಲ್ಲೂಕಿಗೆ ಒಬ್ಬರಂತೆ ಆಯ್ಕೆ ಮಾಡಿ ಅವರಿಗೂ ಎಲ್ಲರಂತೆ ಪ್ರಶಸ್ತಿ ಹಾಗೂ ಸನ್ಮಾನ ಪ್ರಧಾನ ಮಾಡುವಂತೆ ಮನವಿ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪ್ರಕಾಶ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಅಭಿವೃದ್ಧಿ ಉಪನಿರ್ದೇಶಕರಾದ ಪುಟ್ಟರಾಜು ಡಿ.ಟಿ., ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಮು ಕೆ.ಎನ್., ಜಿಲ್ಲಾ ಹಾಗೂ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಖಾಸಗಿ ಶಾಲೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸಭೆಯಲ್ಲಿ ಹಾಜರಿದ್ದರು.
Tags
ಹಾಸನ