ಜಾವಗಲ್: ಸಮೀಪದ ಭೋವಿ ಕಾಲೋನಿಯಲ್ಲಿ ಕಲುಷಿತ ನೀರು ಸೇವಿಸಿ 35ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶನಿವಾರ ನಡೆದಿತ್ತು.
ಭಾನುವಾರ ಶಾಸಕ ಕೆ.ಎಸ್.ಲಿಂಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು ಪಿಡಿಒ ಹಾಗೂ ವಾಟರ್ ಮ್ಯಾನ್ ಅವರ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿ. ಸದ್ಯಕ್ಕೆ ಈ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಹಾಗೂ ಹಾಳಾಗಿರುವ ನೀರಿನ ಟ್ಯಾಂಕನ್ನು ನೆಲಸಮಗೊಳಿಸಿ ನೂತನವಾಗಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗುವುದು. ಹಾಗೂ ಹೊಸದಾಗಿ ಬೋರ್ ವೆಲ್ ಕೊರೆಸಲಾಗುವುದು ಹಾಗೂ ಸಂಸದರ ನಿಧಿಯಲ್ಲಿ ಈ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಶೇಖರ್ ಮಾತನಾಡಿ ಈ ಗ್ರಾಮದ ರಸ್ತೆ ಹಾಗೂ ಚರಂಡಿಗಳು ಹಾಳಾಗಿದ್ದು ಕೂಡಲೇ ಗಮನಹರಿಸಬೇಕು ಎಂದರು.
ವೈದ್ಯಾಧಿಕಾರಿ ದೀಪಕ್ ಮಾತನಾಡಿ ಸ್ವಲ್ಪ ದಿನಗಳ ಕಾಲ ಮನೆಯಲ್ಲಿ ಮಾಂಸಾಹಾರ ಸೇವನೆ ಮಾಡಬಾರದು ಹಾಗೂ ಬಿಸಿ ನೀರನ್ನು ಕುಡಿಯಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಸಂತೋಷ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಟರಾಜ್, ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್, ಪಿಡಿಒ ಜೈಸಿಂಹ, ಆರಕ್ಷಕ ನಿರೀಕ್ಷಕ ಅರುಣ್ ಕುಮಾರ್ ಮತ್ತಿತರರು ಇದ್ದರು.
Tags
ಅರಸೀಕೆರೆ