ಬಣಕಲ್:ಬಂಕೇನಹಳ್ಳಿ ನೂತನ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಆಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಫಲ್ಗುಣಿಯಿಂದ ಬಂಕೇನಹಳ್ಳಿ ಮಾರ್ಗವಾಗಿ ಚೇಗು ಗ್ರಾಮಕ್ಕೆ ಸಾಗುವ ರಸ್ತೆ ಕಾಮಗಾರಿಗೆ ಬಂಕೇನಹಳ್ಳಿಯಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಗುತ್ತಿಗೆದಾರರು ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಕೇಂದ್ರ ಸರ್ಕಾರದ ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಸ್ಥಳೀಯರು ರಸ್ತೆ ಅಗಲೀಕರಣಕ್ಕೆ ಸರ್ಕಾರದ ಮಾನದಂಡದಂತೆ ಜಾಗ ಬಿಟ್ಟುಕೊಡುವ ಮೂಲಕ ಸಹಕಾರ ನೀಡಬೇಕು. 7.5 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗುತ್ತಿದ್ದು ಬಂಕೇನಹಳ್ಳಿ ಸೇತುವೆ 3.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈಗಾಗಲೇ ಮಲೆನಾಡು ಭಾಗದಲ್ಲಿ ಕೇಂದ್ರ ಸರ್ಕಾರದ ಅನುದಾನ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಎಂದರು.
ಶಾಸಕ ಎಂ.ಪಿ ಕುಮಾರಸ್ವಾಮಿ ಮಾತನಾಡಿ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ದಿ ಪಡಿಸಲು ಹೆಚ್ಚಿನ ಆದ್ಯತೆ ನೀಡಲಾಗಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಬಂಕೇನಹಳ್ಳಿಗೆ ತಾತ್ಕಾಲಿಕ ಕಬ್ಬಿಣದ ಸೇತುವೆಯನ್ನು ಅಳವಡಿಸಿದ್ದು ನೂತನ ಸೇತುವೆ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಎಸ್ ರಘು, ತಾ.ಪಂ ಅದ್ಯಕ್ಷ ಕೆ.ಸಿ ರತನ್, ಬಿಜೆಪಿ ಮುಖಂಡರಾದ ಗಜೇಂದ್ರ ಕೊಟ್ಟಿಗೆಹಾರ, ಪಂಚಾಕ್ಷರಿ, ನಯನ ತಳವಾರ, ಸಂಜಯ ಕೊಟ್ಟಿಗೆಹಾರ, ಭರತ್ ಕನ್ನೆಹಳ್ಳಿ, ಸಂಘರ್ಷ, ವಿಕ್ರಂ, ಮುಂತಾದವರು ಇದ್ದರು.
Tags
ಚಿಕ್ಕಮಗಳೂರು