ಹಾಸನ: ಹಾಸನ ನಗರದ ಸಮೀಪ ಬೂವನಹಳ್ಳಿ ಬಳಿ ಇರುವ ಬೆಂಗಳೂರು ರಸ್ತೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆ ಕೂಗಿ ಕರ್ನಾಟಕ ಬಂದ್ ಗೆ ಬೆಂಬಲ ನೀಡಿದ್ದಾರೆ.
ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕರವೇ ಪ್ರತಿಭಟನೆ ಮಾಡುವ ಹಿನ್ನಲೆಯಲ್ಲಿ ಪೊಲೀಸ್ ಸರ್ಪಗಾವಲು ಮೊದಲೇ ಸಿದ್ಧಪಡಿಸಿಕೊಂಡಿತ್ತು. ರಸ್ತೆ ಮಧ್ಯೆ ಪ್ರತಿಭಟನೆ ಮಾಡುವಾಗ ಡಿವೈಎಸ್ಪಿ ಪುಟ್ಟಸ್ವಾಮಿ ಗೌಡರು ಪ್ರತಿಭಟನಗಾರರನ್ನು ಮನವೊಲಿಸಲು ಅನೇಕ ಬಾರಿ ಮುಂದಾಗಿ ಕೊನೆಯಲ್ಲಿ ಸಫಲರಾದರು. ಕರವೇ ಜಿಲ್ಲಾಧ್ಯಕ್ಷರಾಧ ಸಿ.ಡಿ. ಮನುಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಭೂಸುಧಾರಣಾ ಕಾಯಿದೆ ತಿದ್ದುಪಡಿ ವಿರೋಧಿಸಿ, ಎಪಿಎಂಸಿ ಕಾಯಿದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ಕಾಯಿದೆ ತಿದ್ದುಪಡಿ ವಾಪಸ್ ಸರಕಾರ ಪಡೆಯಬೇಕು ಎಂಬ ನಿಟ್ಟನಲ್ಲಿ ರಾಜ್ಯಾಧ್ಯಂತ ರೈತ ಸಂಘಟನೆಗಳು ಕರೆ ಕೊಟ್ಟಿರುವ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷರಾದ ನಾರಾಯಣಗೌಡರ ನಿರ್ದೇಶನದಂತೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವ ಮೂಲಕ ಬೆಂಬಲ ನೀಡಿರುವುದಾಗಿ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರಕಾರ ಕೂಡಲೇ ರೈತ ವಿರೋಧಿ ಕಾಯಿದೆಯನ್ನು ವಾಪಸ್ ಪಡೆದು ರೈತರ ಹಿತಾ ಕಾಪಾಡಬೇಕು ಎಮದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ. ಮನುಕುಮಾರ್, ಉಪಾಧ್ಯಕ್ಷ ಸೀತರಾಮು, ತಾಲೂಕು ಅಧ್ಯಕ್ಷ ಶಿವಣ್ಣಗೌಡ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಭಿಗೌಡ, ಯುವ ಘಟಕದ ಅಧ್ಯಕ್ಷ ಪ್ರೀತಂ, ಕಾರ್ಮಿಕ ಘಟಕದ ಅಧ್ಯಕ್ಷ ಬೋರೇಗೌಡ ಇತರರು ಪಾಲ್ಗೊಂಡಿದ್ದರು.