ಬಂದ್ ಗೆ ಹಾಸನದಲ್ಲಿ ಮಿಶ್ರ ಪ್ರತಿಕ್ರಿಯೆ ನಾನಾ ಸಂಘಟನಗಾರರನ್ನು ಬಂಧಿಸಿ ಬಿಡುಗಡೆ ಮಾಡಿದ ಪೊಲೀಸರು

ಹಾಸನ: ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ವಿವಿಧ ಸಂಘಟನೆಗಳಿಂದ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಹಾಸನದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಸ್ತೆಯಲ್ಲಿ ಕುಳಿತು ಪ್ರತಿಭಟನಾ ಭಾಷಣ ಮಾಡುವಾಗ ವಿಧಾನ ಪರಿಷತ್ತು ಸದಸ್ಯ ಗೋಪಾಲಸ್ವಾಮಿ, ರೈತರು ಹಾಗೂ ವಿವಿಧ ಸಂಘಟನೆಯವರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದ್ದಾರೆ.  

      ಮೊದಲು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ರೈತರು, ವಿವಿಧ ಸಂಘಟನೆಯ ಮುಖಂಡರು ಮೆರವಣಿಗೆ ಮೂಲಕ ಹೊರಟ ಅವರು, ಎನ್.ಆರ್. ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಹೇಮಾವತಿ ಪ್ರತಿಮೆ ಬಳಿ ರಸ್ತೆಯಲ್ಲೆ ಹಾಕಲಾಗಿದ್ದ ಬಹಿರಂಗ ಭಾಷಣದ ಸ್ಟೇಜ್ ಬಳಿ ಜಮಾಯಿಸಿದರು. ಭೂಸುಧಾರಣಾ ಕಾಯಿದೆ ತಿದ್ದುಪಡಿ ವಿರೋಧಿಸಿ, ಎಪಿಎಂಸಿ ಕಾಯಿದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ಕಾಯಿದೆ ವಿರೋಧಿಸಿ ಹಾಗೂ ಸ್ವಾಮಿನಾಥನ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಭಾಷಣದಲ್ಲಿ ಆಕ್ರೋಶವ್ಯಕ್ತಪಡಿಸಲಾಯಿತು. ಮದ್ಯಾಹ್ನದ ವೇಳೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸರು ಸೇರಿ ರಸ್ತೆ ಮಧ್ಯೆ ಕುಳಿತಿದ್ದ ಪ್ರತಿಭಟನಗಾರರನ್ನು ಮನವೊಲಿಸಲು ಮುಂದಾದಗ ಒಪ್ಪದಿದ್ದರಿಂದ ಎಲ್ಲರನ್ನು ಬಂಧಿಸಿ ಪೊಲೀಸ್ ಬಸ್ ನಲ್ಲಿ ಡಿ.ಎ.ಆರ್. ಪೊಲೀಸ್ ಮೈದಾನಕ್ಕೆ ಕರೆದೊಯ್ಯಲಾಯಿತು. ನಂತರ ಕಾನೂನಿನಡಿ ಹೆಸರು ನೊಂದಾಯಿಸಿಕೊಂಡು ಪೊಲೀಸ್ ಬಸ್ ಮೂಲಕವೇ ಸ್ಥಳಕ್ಕೆ ಪ್ರತಿಭಟನಗಾರರನ್ನು ವಾಪಸ್ ಬಿಡಲಾಯಿತು. ಸೋಮವಾರ ನಡೆದ ಕರ್ನಾಟಕ ಬಂದ್ ನಲ್ಲಿ ಹಾಸನದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಖ್ಯ ರಸ್ತೆಯಲ್ಲಿ ಮಾತ್ರ ಅಂಗಡಿ-ಮುಗಟ್ಟು ಬಂದ್ ಗೊಂಡು ಉಳಿದ ಕಡೆ ಬಾಗಿಲನ್ನು ತೆಗೆಯಲಾಗಿತ್ತು. ಪ್ರತಿಭಟನೆ ಬರುವ ವೇಳೆ ಬಾಗಿಲು ಹಾಕಿ ನಂತರ ಬಾಗಿಲು ತೆಗೆಯುವರ ಸಂಖ್ಯೆ ಹೆಚ್ಚು ಕಂಡು ಬಂದಿತು. ಇನ್ನು ನಗರ ಬಸ್ ಸಂಚಾರ ಕಂಡು ಬರಲಿಲ್ಲ. ಇತರೆ ಜಿಲ್ಲೆಗಳಿಂದ ಬರುವ ಬಸ್ ಗಳು ಎಂದಿನಂತೆ ಓಡಾಡಿದವು. ಬಂದ್ ವೇಳೆ ಪ್ರತಿಭಟನಗಾರರು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸಿದರು. ಮುನ್ನೇಚ್ಚರಿಕ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಿಗಿ ಬಂದ್ ಬಸ್ತ್ ಮಾಡಲಾಗಿತ್ತು.



ಎಂ.ಎಲ್.ಸಿ. ಗೋಪಾಲಸ್ವಾಮಿ: ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಮಾತನಾಡಿ, ಕರ್ನಾಟಕ ಬಂದ್ ಹಿನ್ನಲೆಯಲ್ಲಿ ವಿವಿಧ ಸಂಘಟನೆಗಳಿಂದ ಶಾಂತಿಯುತವಾದ ಹೋರಾಟ ಮಾಡುತ್ತಿದ್ದರೂ ಸಹ ನನ್ನನ್ನು ಸೇರಿ ರೈತರು ಹಾಗೂ ವಿವಿಧ ಸಂಘಟನಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಈ ದುರ್ಘಟನೆಗೆ ಕಾರಣವಾಗಿರುವ ಸರಕಾರಕ್ಕೆ ದಿಕ್ಕಾರವನ್ನು ಹೇಳುತ್ತೇವೆ. ಭೂಸುಧಾರಣಾ ಕಾಯಿದೆ ತಿದ್ದುಪಡಿ ವಿರೋಧಿಸಿ, ಎಪಿಎಂಸಿ ಕಾಯಿದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ಕಾಯಿದೆ ತಿದ್ದುಪಡಿಗೆ ವಿರೋಧಿಸುತ್ತೇವೆ. ಬಿಜೆಪಿ ಸರ್ಕಾರಕ್ಕೆ ಭವಿಷ್ಯವಿಲ್ಲ. ಇನ್ನು ಆರು ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನವಾಗಲಿದೆ. Àರ್ಕಾರದ ವಿರುದ್ಧ ನಡೆಸುತ್ತಿರುವ ಬಂದ್‍ಗೆ ನಮ್ಮ ಬೆಂಬಲವಿದೆ. ಈ ಸರ್ಕಾರ ಬೀಳಿಸುವುದೇ ನಮ್ಮಉದ್ದೇಶವಾಗಿದೆ. ರೈತರು ಕಾರ್ಮಿಕರ ವಿರೋಧ ಕಟ್ಟಿಕೊಂಡರೆ ಈ ಸರ್ಕಾರ ಉಳಿಯಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಯಡಿಯೂರಪ್ಪ ಅವರನ್ನು ಕೆಳಗಿಸಲು ಅವರ ಪಕ್ಷದಲ್ಲೇ ಒಂದು ಸಂಘಟನೆ ಇದೆ. ಸರ್ಕಾರ ಬೀಳಿಸಲು ಬಿಜೆಪಿಯವರೇ ಸಿದ್ಧತೆ ನಡೆಸುತ್ತಿದ್ದಾರೆ. ಈ ಕಾಯ್ದೆ ವಿರೋಧಿಸಿ ದಯವಿಟ್ಟು ನಮ್ಮ ಪಕ್ಷಕ್ಕೆ ವಾಪಸ್ ಬನ್ನಿ. ಈ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಭವಿಷ್ಯವಿಲ್ಲ.. ಇನ್ನು ಕೇವಲ ಆರು ತಿಂಗಳಲ್ಲಿಈ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು. ಸರಕಾರವು ಈ ಬಗ್ಗೆ ಗಮನ ನೀಡದಿದ್ದರೇ ಎಲ್ಲಾ ಪ್ರತಿಭಟನಗಾರರ ಜೊತೆ ಸೇರಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.  

      ಇದೆ ವೇಳೆ ಕಾಂಗ್ರೆಸ್ ಪಕ್ಷ, ಜೆಡಿಎಸ್ ಪಕ್ಷ, ರೈತ ಸಂಘ, ದಲಿತ ಸಂಘಟನೆಗಳು, ಸಿಐಟಿಯು, ಕೆ.ಪಿ.ಆರ್.ಎಸ್. ಕೆಆರ್‍ಆರ್‍ಎಸ್, ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಕಾರ್ಮಿಕ ಸಂಘಟನೆ, ವಿದ್ಯಾರ್ಥಿ ಸಂಘಟನೆ, ಯುವಜನ, ಮಹಿಳಾ ಸಂಘಟನೆ, ಕನ್ನಡಪರ ಸಂಘಟನೆ, ರಕ್ಷಣಾ ವೇದಿಕೆ, ಕರ್ನಾಟಕ ಪ್ರಜಾ ಶಕ್ತಿ, ಟಿಪ್ಪು ಸಂಘರ್ಷ ಸಮಿತಿಯ ಸಂಘಟನೆಗಳು ಸೇರಿ ಇತರೆ ಹಲವಾರು ಸಂಘಟನೆಗಳು ಸೇರಿ ಜಂಟಿಯಾಗಿ ಬಂದ್ ಹೋರಾಟದಲ್ಲಿ ಪಾಲ್ಗೊಂಡಿದ್ದವು.

        ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಎಂ.ಎಲ್.ಸಿ. ಗೋಪಾಲಸ್ವಾಮಿ, ದೇವರಾಜೇಗೌಡ, ಜೆಡಿಎಸ್ ಪಕ್ಷದ ಪ್ರೇಮಮ್ಮ, ವಿವಿಧ ಸಂಘಟನೆಯ ಮುಖಂಡರಾದ  ಧರ್ಮೇಶ್, ಎಚ್.ಆರ್.ನವೀನ್‍ಕುಮಾರ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ, ಅಧ್ಯಕ್ಷರಾದ ಕಣಗಾಲ್ ಮೂರ್ತಿ, ಸುರೇಶ್ ಬಾಬು, ಸಯ್ಯಾದ್ ಸಾದೀಕ್, ಸತೀಶ್ ಪಟೇಲ್, ಅಂಬೂಗ ಮಲ್ಲೇಶ್, ಎಸ್.ಎನ್ ಮಲ್ಲಪ್ಪ, ಎಂ.ಜಿ. ಪೃಥ್ವಿ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post