ಶ್ರವಣಬೆಳಗೊಳದ ಪ್ರಧಾನ ಪುರೋಹಿತ ಎಸ್.ಪಿ.ಉದಯಕುಮಾರ್ ಶಾಸ್ತ್ರಿ ನಿಧನರಾಗಿದ್ದಾರೆ

ಶ್ರವಣಬೆಳಗೊಳ: ಶ್ರೀಕ್ಷೆತ್ರದ ಪ್ರಧಾನ ಪುರೋಹಿತರಾಗಿದ್ದ  ಎಸ್.ಪಿ.ಉದಯಕುಮಾರ್ ಶಾಸ್ತ್ರಿ (57 ವರ್ಷ) ಸೋಮವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.
      ಶ್ರೀಕ್ಷೇತ್ರದ ವಿಂಧ್ಯಗಿರಿ, ಚಂದ್ರಗಿರಿ ಬೆಟ್ಟ ಹಾಗೂ ಜಿನಾಲಯಗಳಲ್ಲಿ ಪೂಜಾ ವಿಧಿ-ವಿಧಾನ, ಆರಾಧನೆ, ವಾರ್ಷಿಕ ಪಂಚಕಲ್ಯಾಣ, ನವರಾತ್ರಿ ಅಷ್ಟವಧಾನ ಪೂಜೆ ಹಾಗೂ ವಿಶೇಷ ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿ ಶಾಸ್ತ್ರೀಯ ಜೈನಾಗಮ ಪರಂಪರೆಯಂತೆ ಶಾಸ್ತ್ರಿ ಪದವಿ ಪಡೆದಿದ್ದ ಇವರು, 1993, 2006 ಹಾಗೂ 2018 ರ ವಿಶ್ವವಿಖ್ಯಾತ ಮಹಾಮಸ್ತಕಾಭಿಷೇಕ ಮಹೋತ್ಸವದ ಪಂಚಕಲ್ಯಾಣ ಕಾರ್ಯಕ್ರಮಗಳಲ್ಲಿ ಪೌರೋಹಿತ್ಯ ಸೇವೆ ಸಲ್ಲಿಸಿದ್ದರು.
       ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಎಸ್.ಪಿ.ಉದ್ಯಕುಮಾರ ಶಾಸ್ತ್ರಿಗಳ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿ, ಮೃತರ ಅಗಲಿಕೆಯಿಂದ ಜೈನ ಸಮಾಜವು ಉತ್ತಮ ಶಾಸ್ತ್ರಿಗಳೊಬ್ಬರನ್ನು ಕಳೆದುಕೊಂಡಂತಾಗಿದ್ದು, ಇವರ ಆತ್ಮಕ್ಕೆ ಚಿರಶಾಂತಿ ಲಭಿಸಿ ಮುಂದೆ ಸದ್ಗತಿ ಮೋಕ್ಷ ಪ್ರಾಪ್ತವಾಗಿ ಎಂದು ಭಗವಾನ್ ಬಾಹುಬಲಿ ಸ್ವಾಮಿಯವರಲ್ಲಿ ಪ್ರಾರ್ಥಿಸಿದರು.
        ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯೆ ಮಮತಾ ರಮೇಶ್, ತಾಲೂಕು ಪಂಚಾಯ್ತಿ ಸದಸ್ಯೆ ಮಹಾಲಕ್ಷ್ಮಿ ಶಿವರಾಜ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲತಾ ರಮೇಶ್ ಸೇರಿದಂತೆ, ಶ್ರವಣಬೆಳಗೊಳ ದಿಗಂಬರ ಜೈನ ಸಮಾಜ, ಕೂಷ್ಮಾಂಡಿನಿ ಜೈನ ಮಹಿಳಾ ಸಮಾಜ, ಅಖಿಲ ಭಾರತ ದಿಗಂಬರ ಜೈನ ಪುರೋಹಿತ ಪರಿಷತ್ತು ಹಾಗೂ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದರು.
     ಮೃತರು ಪತ್ನಿ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Post a Comment

Previous Post Next Post