ಲೇಖನ: ಅನಂತರಾಜೇಅರಸು ,ಬೇಲೂರು.
ವಿಶ್ವಪ್ರಸಿದ್ಧ ಶ್ರೀಚನ್ನಕೇಶವಸ್ವಾಮಿ ದೇಗುಲದ ವಿವಿಧ ಪ್ರಾಕಾರಗಳು ಸೋರುತ್ತಿದ್ದು ರಕ್ಷಣೆ ಅಗತ್ಯವಿದೆ.
ದೇಗುಲದೊಳಗಿನ ಸೌಮ್ಯನಾಯಕಿ ಅಮ್ಮನವರು ಹಾಗೂ ರಂಗನಾಯಕಿ ಅಮ್ಮನವರ ಗುಡಿಗಳು ಅತಿಹೆಚ್ಚು ಮಳೆ ಬಂದ ವೇಳೆ ಸೋರುತ್ತಿವೆ. ಹಲವು ಶಾಸನ, ವಿಗ್ರಹಗಳನ್ನು ಇಡಲಾಗಿರುವ ಕೈಸಾಲೆಯಲ್ಲಿ ಯತೇಚ್ಛವಾಗಿ ಸೋರುತ್ತಿದ್ದು ನೀರು ಕೈಸಾಲೆಯ ಉದ್ದಕ್ಕೂ ನಿಂತಿರುತ್ತದೆ. ಈ ಕೈಸಾಲೆಯ ಕಂಬಗಳಲ್ಲಿ ಕೆಲವು ವಾರೆಯಾಗಿದ್ದು ನೆಲಹಾಸುಗಳು ಜರುಗಿವೆ.
ದೇಗುಲದ ಕಚೇರಿಯಲ್ಲಿ ಸೋರುಕೆ ಇದ್ದು ದೇಗುಲದ ಸಮಿತಿಯವರು ಸಭೆ ನಡೆಸುವ ಸ್ಥಳದಲ್ಲಿಯೆ ನೀರು ಹನಿಯುತ್ತಿದೆ. ಸ್ವಯಂಪಾಕಿ ಕೊಠಡಿಯಲ್ಲಿ ಹೆಚ್ಚು ಸೋರಿಕೆ ಉಂಟಾಗಿದೆ. ಸಂಸ್ಕೃತಪಾಠಶಾಲೆಯಲ್ಲಿಯೂ ಮಳೆನೀರು ಹನಿಯುತ್ತಿದೆ. ವಿವಿಧ ಉತ್ಸವಮೂರ್ತಿಗಳನ್ನು ಇಡಲಾಗಿರುವ ಸ್ಥಳದಲ್ಲಿಯೂ ಸೋರುವುದರಿಂದ ಮೂರ್ತಿಗಳಿಗೆ ಹಾನಿಯಾಗುತ್ತಿದೆ. ದ್ವಾರಗೋಪುರದ ಮೇಲೆ ಗಿಡಗೆಂಟೆಗಳು ಬೆಳೆದಿದ್ದು ಪಾಚಿಬಂದಿದೆ. ಈ ಹಿಂದೆ ಶ್ರೀಚನ್ನಕೇಶವಸ್ವಾಮಿ ದೇಗುಲದ ಗರ್ಭಗುಡಿಯ ಸಮೀಪ ಸೋರುತ್ತಿದ್ದನ್ನು ದುರಸ್ತಿಪಡಿಸಲಾಗಿತ್ತು.
ದೇಗುಲದ ಒಳಗಿನ ಆವರಣದ ನೆಲಹಾಸಿನ ಕಲ್ಲುಗಳ ನಡುವೆ ಹುಲ್ಲು ಬೆಳೆಯುತ್ತಿದ್ದು ಕೀಳುವವರಿಲ್ಲದಂತಾಗಿದೆ. ಕೆಲವೊಂದು ಮಾಹಿತಿ ಫಲಕಗಳೂ ಸಹ ಅಕ್ಷರ ಕಾಣದಂತಾಗಿದೆ. ರಂಗಮAದಿರವAತೂ ಯಾವಾಗ ನೆಲಕಚ್ಚುವುದೊ ಎಂಬಷ್ಟು ಹಾನಿಗೊಳಗಾಗಿದೆ. ಕೊರೊನಾ ಆತಂಕದ ನಡುವೆಯೂ ದೇಗುಲಕ್ಕೆ ಪ್ರವಾಸಿಗರು ಬರುತ್ತಿದ್ದು ದಿನಕಳೆದಂತೆ ಸಂಖ್ಯೆ ಹೆಚ್ಚುತ್ತಿದ. ಈವರಗೆ ಪ್ರವಾಸಿಗರು ಇಲ್ಲದೆ ದೇಗುಲದ ಗೈಡುಗಳಿಗೆ ತೊಂದರೆ ಆಗಿತ್ತಾದರೂ ಇದೀಗ ಚೇತರಿಕೆ ಕಾಣುತ್ತಿದ್ದಾರೆ.
ಸೋರುತ್ತಿರುವುದುನ್ನು ನಿಲ್ಲಿಸುವ ಜವಾಬ್ದಾರಿ ಕೇಂದ್ರಪುರಾತತ್ವ ಇಲಾಖೆಯ ಅಧಿಕಾರಿಗಳದ್ದಾಗಿದೆ. ದೇಗುಲದ ಮುಜರಾಯಿ ಇಲಾಖೆ ಕಾರ್ಯನಿರ್ವಾಹಕಾಧಿಕಾರಿಗಳು ಕೇಂದ್ರ ಪುರಾತತ್ವ ಇಲಾಖೆಗೆ ಪತ್ರ ಬರೆದಿದ್ದರೂ ಈವರಗೆ ಕ್ರಮ ಕೈಗೊಂಡಿಲ್ಲ. ತೀರಾಶಿಥಿಲಗೊಂಡಿರುವ ರಂಗಮAದಿರವೇನಾದರೂ ಬಿದ್ದು ಪ್ರಾಣಹಾನಿ ಸಂಭವಿಸಿದರೆ ಅದಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳೆ ಹೊಣೆಯಾಗುತ್ತಾರಾದರೂ ಸತ್ತಮೇಲೆ ಏನಾದರೇನು ಹೋದ ಪ್ರಾಣ ವಾಪಸ್ ಬರುವುದೆ ಎನ್ನುವ ಪ್ರಶ್ನೆ ಸಹಜವಾಗೆ ಎದುರಾಗುತ್ತದೆ.
ಹದಿನೈದು ದಿನದ ಹಿಂದೆ ಕೇಂದ್ರಪುರಾತತ್ವ ಇಲಾಖೆ ಅಧೀಕ್ಷಕರು ಸಕಲೇಶಪುರ ತಾಲೂಕು ಮಂಜ್ರಾಬಾದ್‌ಕೋಟೆಗೆ ಆಗಮಿಸಿದ್ದರೆಂಬ ಮಾಹಿತಿ ಇದ್ದು ಆವೇಳೆ ಬೇಲೂರಿಗೂ ಭೇಟಿ ನೀಡಿ ಏನೆಲ್ಲಾ ಸಮಸ್ಯೆಯಿದೆ ಎಂಬುದನ್ನು ತಿಳಿದುಕೊಂಡು ಹೋಗಬಹುದಿತ್ತು. ಆದರೆ ಏಕೆ ಬರಲಿಲ್ಲ ಎಂಬುದನ್ನು ಉತ್ತರ ಅವರಿಂದಲೆ ದೊರಕಬೇಕಿದೆ. ಶ್ರೀಚನ್ನಕೇಶವಸ್ವಾಮಿ ದೇಗುಲ ವಿಶ್ವಮನ್ನಣೆ ಪಡೆದಿರುವ ದೇಗುಲ. ಶೀಘ್ರದಲ್ಲೆ ಈ ದೇಗುಲವನ್ನು ವಿಶ್ವಪರಂಪರೆಪಟ್ಟಿಗೆ ಸೇರಿಸುವ ಉದ್ದೇಶವೂ ಇದೆ. ಇಂತಹ ಅತ್ಯದ್ಭುತವಾದ ದೇಗುಲದ ಯಾವುದೆ ಒಂದು ಭಾಗಕ್ಕೆ ಹಾನಿಯಾದರೂ ಅದು ದೊಡ್ಡಮಟ್ಟದ ನಷ್ಟವೆ ಎಂಬುದು ವಾಸ್ತವ. ಈಗಲಾದರೂ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು ಗಮನಹರಿಸಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ.
ದೇಗುಲದಿಂದ ಸೋರುತ್ತಿರುವ ದೇಗುಲ, ಇನ್ನಿತರ ಕೊಠಡಿ, ಕೈಸಾಲೆ, ಸ್ವಯಂಪಾಕಿ, ರಂಗಮAದಿರ ಈ ಎಲ್ಲವನ್ನು ದುರಸ್ತಿಪಡಿಸಿಕೊಡುವಂತೆ ಕೇಂದ್ರಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ತುರ್ತಾಗಿ ಕ್ರಮ ಕೈಗೊಳ್ಳುವರೆಂಬ ಆಶಯವಿದೆ.
-ಉಮಾ, ದೇಗುಲ ಕಾರ್ಯನಿರ್ವಾಹಣಾಧಿಕಾರಿಗಳು