ಕೋವಿಡ್ ತಡೆ ಜನಾಂದೋಲನ ಅಭಿಯಾನ : ಜಿಲ್ಲಾ ನ್ಯಾಯಾಧೀಶರಿಂದ ಪ್ರತಿಜ್ಞಾ ವಿಧಿ ಭೋದನೆ

 

ಚಾಮರಾಜನಗರ, ಅ.17:- ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್, ಆರೋಗ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದೊಂದಿಗೆ ಜನಾಂದೋಲನ ಅಭಿಯಾನ ಕೋವಿಡ್-19 ಕಾರ್ಯಕ್ರಮವು ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಇಂದು ನಡೆಯಿತು. 

      ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸದಾಶಿವ ಎಸ್. ಸುಲ್ತಾನ್‍ಪುರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋವಿಡ್ ವೈರಾಣು ಹರಡುವಿಕೆ ತಡೆಯಲು ಅಗತ್ಯವಾದ ಎಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಳ್ಳುವ ಮತ್ತು ಬೇರೆಯವರು ಅನುಸರಿಸುವ ನಿಟ್ಟಿನಲ್ಲಿ ಉತ್ತೇಜಿಸುವ ಅಂಶಗಳನ್ನೊಳಗೊಂಡ ಪ್ರತಿಜ್ಞಾ ವಿಧಿಯನ್ನು ಜಿಲ್ಲಾ ನ್ಯಾಯಾಧೀಶರು ಭೋದಿಸಿದರು. 

       ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ನ್ಯಾಯಾಧೀಶರು ಕೋವಿಡ್-19 ವಿರುದ್ದ ಹೋರಾಟದಲ್ಲಿ ಎಲ್ಲರೂ ಒಟ್ಟಾಗಿ ನಿಂತು ಜಯಗಳಿಸಬೇಕು. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸೋಪಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್, ಮುಖ ಕವಚ ಧರಿಸಬೇಕು ಎಂದು ಸಲಹೆ ಮಾಡಿದರು. 

      ಹೆಚ್ಚು ವ್ಯಾಪಿಸುತ್ತಿರುವ ಕೋವಿಡ್-19 ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಿ ಇರಬೇಕು. ಆರೋಗ್ಯದ ಕಡೆ ಕಾಳಜಿ ಹೊಂದಬೇಕು, ಕೋವಿಡ್ ತಡೆಯಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲನೆ ಮಾಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದೆಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು. 

     ಇದೇ ವೇಳೆ ಕೋವಿಡ್ ಜನ ಜಾಗೃತಿ ಸಂದೇಶಗಳನ್ನು ನೀಡಲು ವಿನ್ಯಾಸಗೊಳಿಸಿರುವ ಧ್ವನಿ ವರ್ಧಕ ಅಳವಡಿಕೆಯ ವಾಹನಗಳ ಸಂಚಾರಕ್ಕೆ ಜಿಲ್ಲಾ ನ್ಯಾಯಧೀಶರು ಇತರೆ ಗಣ್ಯರೊಂದಿಗೆ ಹಸಿರು ನಿಶಾನೆ ತೋರಿದರು. 

       ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ರಮೇಶ್, ಸಿ.ಜಿ. ವಿಶಾಲಕ್ಷಿ, ಗಣಪತಿ.ಜಿ.ಬಾದಾಮಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮಹಮ್ಮದ್ ರೋಷನ್ ಷಾ, ಅಪರ ಸಿವಿಲ್ ನ್ಯಾಯಾಧೀಶರಾದ ಎಸ್.ವಿ. ಸ್ಮಿತಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಂ.ಆರ್. ರವಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಎ.ರಮೇಶ್, ಜಿಲ್ಲಾ ವಕಿಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಮಂಜು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Post a Comment

Previous Post Next Post