ಹಾಸನ: ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಹಾಗೂ ಸರಕಾರದ ಕಣ್ಣು-ಕಿವಿ ತೆರೆಸಲು ದಲಿತ ಛಲವಾದಿ ಮಾದಿಗ ಸಮುದಾಯಗಳಲ್ಲಿ ಅರಿವು ಮೂಡಿಸಲು ಬೃಹತ್ ತಮಟೆ ಚಳುವಳಿ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ತಮಟೆ ಚಳುವಳಿಯು ಎನ್.ಆರ್. ವೃತ್ತ, ಬಿ.ಎಂ. ರಸ್ತೆ ಮೂಲಕ ತಮಟೆ ಬಾರಿಸಿಕೊಂಡು ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಬಂದರು. 2020 ಆಗಸ್ಟ್ 27 ರಂದು ಈ ದೇಶದ ಸುಪ್ರೀಂ ಕೋರ್ಟ್‍ನ ಗೌರವಾನ್ವಿತ ನ್ಯಾಯಮೂರ್ತಿ ಅರುಣ್ ಮಿಶ್ರ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ಇದ್ದ ಅಡ್ಡಿ - ಆತಂಕಗಳನ್ನು ದೂರ ಮಾಡಿ, ಒಳಮೀಸಲಾತಿ ಕಲ್ಪಿಸಬಹುದಂದು ತೀರ್ಪು ನೀಡಿದೆ. ಅಲ್ಲದೆ ರಾಜ್ಯ ಸರ್ಕಾರಗಳಿಗೂ ಕೂಡಾ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಮುಕ್ತ ಅವಕಾಶ ನೀಡಿದೆ ಎಂದರು. ಅಸ್ಪಶ್ಯ ಜಾತಿಗೆ ಸೇರಿದ ಹೊಲೆಯ, ಮಾದಿಗ, ಸಮುದಾಯಗಳು ಯಾವುದೇ ಗೊಂದಲ, ಆತಂಕಕ್ಕೀಡಾಗದೆ ಒಗ್ಗೂಡಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಜಾರಿಗೊಳಿಸಲು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಹಾಸನ ಜಿಲ್ಲಾ ದಲಿತ ಛಲವಾದಿ ಮಾದಿಗ ಸಮುದಾಯಗಳ ವತಿಯಿಂದ ಆಗ್ರಹಪಡಿಸುತ್ತಿರುವುದಾಗಿ ಹೇಳಿದರು.
ಈ ಸಂಬಂಧ ಸರ್ಕಾರದ ಕಣ್ಣು, ಕಿವಿ ತೆರೆಸಲು ಸದಾಶಿವ ಆಯೋಗದ ವರದಿಯ ಬಗ್ಗೆ ದಂತ ಛಲವಾದಿ ಮಾದಿಗ ಸಮುದಾಯಗಳಲ್ಲಿ ಅರಿವು ಮೂಡಿಸಲು ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ವರೆಗೆ ತಮಟೆ ಬಡಿಯುವ ಮೂಲಕ ನಮ್ಮ ಕೂಗನ್ನು ಸರ್ಕಾರಕ್ಕೆ ತಲುಪಿಸಬೇಕಾಗಿದೆ. ಆದುದರಿಂದ ಅಸ್ಪೃಶ್ಯ ಜಾತಿಗೆ ಸೇರಿದ ಹೊಲೆಯ, ಮಾದಿಗ, ಛಲವಾದಿ, ಆದಿ ಕರ್ನಾಟಕ, ಆದಿ ದ್ರಾವಿಡ ಜನಾಂಗಕ್ಕೆ ಸೇರಿದ ಬಂಧು, ಬಾಂಧವರು, ಹಿತೈಶಿಗಳು, ಸಂಘ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೆ ವೇಳೆ ದಲಿತ ಛಲವಾದಿ ಮಾದಿಗ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಕೃಷ್ಣದಾಸ್, ದಲಿತ ಮುಂಖಂಡರಾದ ಅಂಬೂಗ ಮಲ್ಲೇಶ್, ನಾಗರಾಜ್ ಹೆತ್ತೂರ್, ಹೆಚ್.ಪಿ. ಶಂಕರ್, ಆರ್.ಪಿ.ಐ. ಸತೀಶ್, ರಾಜೇಶ್, ಚಿನ್ನಸ್ವಾಮಿ, ರಾಜಶೇಖರ್, ರಮೇಶ್ ಇತರರು ಉಪಸ್ಥಿತರಿದ್ದರು.