ಸಂವಿಧಾನದ ಹಕ್ಕು ಮತ್ತು ಕರ್ತವ್ಯ ಪಾಲನೆ ಪ್ರತಿಯೊಬ್ಬರ ಕರ್ತವ್ಯ: ನ್ಯಾ.ಬಸವರಾಜ್ ಚೆಂಗಟಿ



ಚಿಕ್ಕಮಗಳೂರು: ನಮ್ಮ ದೇಶದ ಎಲ್ಲಾ ಕಾನೂನುಗಳು ಸಂವಿಧಾನದ ಅಡಿಯಲ್ಲಿದ್ದು ಅದರಲ್ಲಿನ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬ ನಾಗರೀಕರು ಪಾಲನೆ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಯಶಸ್ಸು ಸಿಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ  ಹೇಳಿದರು.. 
ತಾಲ್ಲೂಕಿನ ಅಂಬಳೆ ಗ್ರಾಮದ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ತಾಲ್ಲೂಕು ಪಂಚಾಯಿತಿ ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆ ಮತ್ತು ಭಾರತ ಸಂವಿಧಾನದ 70ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ಸಂವಿಧಾನದ ಮೂಲ ಭೂತ ಕರ್ತವ್ಯ ಹಾಗೂ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತವು ಪ್ರಜಾಪ್ರಭುತ್ವ ರಾಷ್ಟ್ರ ವಾಗಿದ್ದು ಸಂವಿಧಾನವು ಲಿಖಿತ ಮಾದರಿ ಯನ್ನು ಹೊಂದಿದೆ ಅದರಲ್ಲಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸೇರಿದಂತೆ ಹಲವು ಮಹತ್ತರ ವಿಷಯಗಳನ್ನು ಒಳಗೊಂಡು ಇತರೆ ರಾಷ್ಟ್ರಗಳಿಗೆ ಮಾದರಿ ಯಾಗಿದೆ ಎಂದ ಅವರು ಸರ್ವರಿಗೂ ಸಮಾನತೆ ಎಂಬ ಧ್ಯೇಯೊದ್ದೇಶದಂತೆ ಸಂವಿಧಾನವು ಪ್ರತಿಯೊಬ್ಬ ನಾಗರೀಕರಿಗೆ ಹಕ್ಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಎಲ್ಲಾ ನಾಗರೀಕರು ಹಕ್ಕುಗಳನ್ನು ಅನುಭವಿಸುವಂತೆ ಕರ್ತವ್ಯಗಳನ್ನು ತಪ್ಪದೇ ಪಾಲನೆ ಮಾಡಿದಾಗ ದೇಶ ಪ್ರಗತಿಪಥದತ್ತ ಸಾಗಲಿದೆ ಎಂದರು.
ಸುಪ್ರಿಂಕೋರ್ಟ್ ನಿರ್ದೇಶನದಂತೆ ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದರ ಮುಖ್ಯ ಉದ್ದೇಶ ಸಾರ್ವಜನಿಕರು, ವಿದ್ಯಾರ್ಥಿ ಗಳಲ್ಲಿ ಸಂವಿಧಾನದ ಹಕ್ಕು ಮತ್ತು ಕರ್ತವ್ಯ ಗಳ ಬಗ್ಗೆ, ಪ್ರಸ್ತಾವನೆಯ ಮಹತ್ವದ ಕುರಿತು ಅರಿವು ಮೂಡಿಸುವುದಾಗಿದೆ ಎಂದರು. 
ಡಾ.ಬಿ.ಆರ್ ಅಂಬೇಡ್ಕರ್ ಒಳಗೊಂಡ ಸಮಿತಿಯ ಸತತ ಪರಿ ಶ್ರಮದಿಂದಾಗಿ ಭಾರತೀಯರಿಗೆ ಮಾದರಿ ಸಂವಿಧಾನ ದೊರೆತಿದ್ದು ಅದರಲ್ಲಿ ಸರ್ವ ಜನಾಂಗದ ಅಭ್ಯುದಯವನ್ನು ಒಳಗೊಂಡ ಅಂಶಗಳಿವೆ ಇದರ ಅಧ್ಯಯನ ಪ್ರತಿಯೊಬ್ಬರಿಗೂ ಅತ್ಯವಶ್ಯಕ ಎಂದ ಅವರು ಆಧುನಿಕ ಯುಗದಲ್ಲಿ ಮನುಷ್ಯ ಸ್ವೇಚ್ಛಾಚಾರವನ್ನು ಬಿಡಬೇಕು ಅವನ ದುರಾಸೆಯಿಂದಾಗಿ ಅರಣ್ಯ ಸೇರಿದಂತೆ ಜೀವ ವೈವಿದ್ಯ ಪ್ರಾಣಿಗಳು, ನಾಶವಾಗು ತ್ತಿದ್ದು ಅದರ ಪರಿಣಾಮವಾಗಿ ಅನೇಕ ಪ್ರಾಕೃತಿಕ ವಿಕೋಪಗಳನ್ನು ಎದುರಿಸಬೇಕಾಗಿದೆ ಭವಿಷ್ಯದ ಪೀಳಿಗೆಗೆ ಇವುಗಳ ಸಂರಕ್ಷಣೆ ಅವಶ್ಯಕ ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ಸಿ ಶಿವ ಅವರು ಸಂವಿಧಾನದ ಪ್ರಸ್ತಾವನೆ ಹಾಗೂ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಮಾತನಾಡಿ ಪ್ರಸ್ತಾವನೆಯು ಸಂವಿಧಾನದ ಆತ್ಮವಿದ್ದಂತೆ ರಾಮಾಯಣ, ಮಹಾಭಾರತ, ಕುರಾನ್‍ಗಿಂತ ದೇಶದ ಸಂವಿಧಾನವನ್ನು ಪ್ರತಿಯೊಬ್ಬ ನಾಗರೀಕರು ಕಡ್ಡಾಯವಾಗಿ ಓದಲೇಬೇಕು ಎಂದರು. ವಿಶ್ವದಲ್ಲಿಯೇ ಬೃಹತ್ ಲಿಖಿತ ಸಂವಿಧಾನ ನಮ್ಮದಾಗಿದೆ ಎಂದರು.

Post a Comment

Previous Post Next Post