ಕೆ.ಆರ್.ನಗರ, ನ.05:- ಕರೊನಾ ಸೋಂಕು ಹರಡುವಿಕೆಯನ್ನು ತಡೆಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿ ಭ್ರಷ್ಟಚಾರಗಳಲ್ಲಿ ಮುಳುಗಿದ ಪರಿಣಾಮ ಜನ ಸಾಮಾನ್ಯರ ಹಿತ ಮತ್ತು ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ ಎಂದು ಕೆಪಿಸಿಸಿ ಆರೋಗ್ಯ ಹಸ್ತ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಸಂಸದ ದ್ರುವನಾರಾಯಣ್ ಹೇಳಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಆರೋಗ್ಯ ಹಸ್ತ ಕಾರ್ಯಕ್ರಮದ ಕೆಪಿಸಿಸಿ ಆರೋಗ್ಯ ಕವಚ ಜೀವ ವಿಮಾ ಬಾಂಡ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚಾಗುತ್ತಿದ್ದ ಸಂದರ್ಭದಲ್ಲಿ ಸರ್ಕಾರ ತನ್ನ ಆರೋಗ್ಯ ಸಿಬ್ಬಂದಿಗಳಿಂದ ಮಾಡಿಸಬೇಕಾದ ಜನರಲ್ಲಿ ಅರಿವು, ತಪಾಸಣೆ, ಮುಂಜಾಗ್ರತೆ ಕೆಲಸಗಳನ್ನು ನಮ್ಮ ಪಕ್ಷ ಕಾರ್ಯಕರ್ತರಿಂದ 2 ತಿಂಗಳು ಮಾಡಿಸಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಮ್ಮ ಪಕ್ಷದಿಂದ 15 ಸಾವಿರ ಕಾಂಗ್ರೆಸ್ ಕಾರ್ಯಕರ್ತ ಕರೊನಾ ವಾರಿಯರ್ಸ್‍ಗೆ 320 ವೈದ್ಯಾಧಿಕಾರಿಗಳಿಂದ ತರಬೇತಿ ಕೊಡಿಸಿ 7800 ಆರೋಗ್ಯ ಹಸ್ತ ಪಿಪಿಇ ಕಿಟ್ ವಿತರಿಸಿದ್ದೇವೆ. ತಾಲೂಕಿನಲ್ಲೂ 40 ಕಿಟ್ ವಿತರಿಸಿದ್ದು ನಮ್ಮ ವಾರಿಯರ್ಸ್‍ಗಳು ಎಲ್ಲರ ಮನೆ ಮನೆಗೆ ತೆರಳಿ ಧೈರ್ಯವಾಗಿ ಪರೀಕ್ಷೆ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ನಮ್ಮ ಕೋರೋನಾ ವಾರಿಯರ್ಸ್‍ನ ಆರೋಗ್ಯ ರಕ್ಷಣೆಗಾಗಿ ಕೆಪಿಸಿಸಿ ತಲಾ 1 ಲಕ್ಷದ ವಿಮೆಯಂತೆ 6 ಕೋಟಿ ವೆಚ್ಚ ಮಾಡಿದೆ ಎಂದರು.
ಆದ್ದರಿಂದ ಜನರ ಕಷ್ಟಕಾಲದಲ್ಲಿ ಸ್ಪಂದಿಸಿ ಸೇವೆ ಮಾಡುವಂತಹ ನಮ್ಮ ಪಕ್ಷಕ್ಕೆ ಎಲ್ಲರು ಬೆಂಬಲಿಸಬೇಕಾಗಿದೆ. ಎಂದು ಹೇಳಿದ ದ್ರುವನಾರಾಯಣ್ ಕೆ.ಆರ್.ನಗರ ತಾಲೂಕು ತಳ ಮಟ್ಟದಲ್ಲಿ ಕಾಂಗ್ರೆಸ್ ಭದ್ರಕೋಟೆಯಾದರೂ ಸಹ ಶಾಸಕ ಸ್ಥಾನವನ್ನು ಹೊಂದಿಲ್ಲದೇ ಇರುವುದು ಬೇಸರ ತರಿಸಿದೆ ಆದ್ದರಿಂದ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಕಾಂಗ್ರೆಸ್ ಅಭ್ಯರ್ಥಿಯನ್ನು ಶಾಸಕರಾಗಿ ಮಾಡಲು ಕಂಕಣ ಬದ್ಧರಾಗಿ ಕೆಲಸ ಮಾಡಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಕರೊನಾ ವಾರಿಯರ್ಸ್ ಆಗಿ ಕೆಲಸÀ ನಿರ್ವಹಿಸಿದವರುಗಳಿಗೆ ಕೆಪಿಸಿಸಿ ಆರೋಗ್ಯ ಕವಚ ಜೀವ ವಿಮಾ ಬಾಂಡ್‍ನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ರವಿಶಂಕರ್, ಕೆಪಿಸಿಸಿ ಸದಸ್ಯ ಎಸ್.ಪಿ.ತಮ್ಮಯ್ಯ, ತಾಪಂ ಅಧ್ಯಕ್ಷ ಜಯರಾಮೇಗೌಡ, ಕಾಂಗ್ರೆಸ್ ಗ್ರಾಮಂತರ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್‍ಕುಮಾರ್ ತಾಲ್ಲೂಕು ಕಾಂಗ್ರೇಸ್ ವಕ್ತಾರ ಸೈಯದ್ ಜಾಬೀರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಹದೇವ್, ಉದಯಶಂಕರ್, ನಗರಾಧ್ಯಕ್ಷ ಎಂ.ಜೆ.ರಮೇಶ್, ಪುರಸಭಾ ಸದಸ್ಯರಾದ ಕೋಳಿಪ್ರಕಾಶ್, ನಟರಾಜ್, ಶಿವುನಾಯಕ್, ಶಂಕರ್, ಸುಬ್ರಮಣ್ಯ, ಆನಂದ್, ಜಾವೀದ್, ಸಿದ್ದಿಕ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಪ್ರಸಾದ್, ಮುಖಂಡರಾದ ವಿನಯ್, ಲೋಕೇಶ್, ಪುಟ್ಟು ಸೇರಿದಂತೆ ಇನ್ನಿತರರು ಹಾಜರಿದ್ದರು.