ಬೆಂಗಳೂರು: ರಾಜ್ಯದಲ್ಲಿ ಶೀಘ್ರದಲ್ಲೇ ಇದೇ ಮೊದಲ ಬಾರಿಗೆ ನೂತನ ಆರೋಗ್ಯ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಸರ್ಕಾರ ನಿರ್ಧರಿಸಿದ್ದು, ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಂಗಳವಾರ ತಿಳಿಸಿದ್ದಾರೆ.
ಬೆಂಗಳೂರಿನ ಶಿವಾಜಿನಗರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಸದಲ್ಲಿ 1985, 2002 ಮತ್ತು 2017ರಲ್ಲಿ ಆರೋಗ್ಯ ನೀತಿ ಪ್ರಕಟಿಸಲಾಗಿದೆ. ಆದರೆ, ರಾಜ್ಯವು ಈ ವರೆಗೂ ತನ್ನದೇ ಆದ ಆರೋಗ್ಯ ನೀತಿಯನ್ನು ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಆರೋಗ್ಯ ನೀತಿಯನ್ನು ಘೋಷಿಸಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಹೃದಯ, ಕಿಡ್ನಿ, ಲಿವರ್ ಸಂಬಂಧಿತ ಕಾಯಿಲೆಗಳು, ಕ್ಯಾನ್ಸರ್’ಗೆ ವಿಶೇಷ ಕೋಶ ನಿರ್ಮಿಸುವ ಚಿಂತನೆ ನಡೆಸಲಾಗಿದೆ. ಹಾಗೆಯೇ ಹುಬ್ಬಳ್ಳಿಯಲ್ಲಿ ಏಮ್ಸ್ ಆಸ್ಪತ್ರೆಯನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದ್ದು, ಕೇಂದ್ರವೂ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶ್ವಸಂಸ್ಥೆಯ ಮಾನದಂಡದ ಪ್ರಕಾರ ಸಾವಿರ ಮಂದಿಗೆ ಒಬ್ಬರು ವೈದ್ಯರಿರಬೇಕತು. ಆದರೆ, ಭಾರದಲ್ಲಿ 10ರಿಂದ 12 ಸಾವಿರ ಮಂದಿಗೆ ಒಬ್ಬರು ವೈದ್ಯರಿದ್ದಾರೆ. ವೈದ್ಯರ ಸಂಖೆಯನ್ನು ಹೆಚ್ಚಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ವೈದ್ಯಕೀಯ ಕಾಲೇಜ್ ಸ್ಥಾಪಿಸುವ ಗುರಿ ಇಟ್ಟುಕೊಳ್ಳಲಾಗಿದೆ. ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ಹಾಸಿಗೆ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಒಂದು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ರೂ.600-700ಕೋಟಿ ವೆಚ್ಚವಾಗಲಿದ್ದು, ಈ ಹಿನ್ನೆಲೆಯಲ್ಲಿ ಗುಜರಾತ್ ಮಾದರಿಯಲ್ಲಿ ಸಾರ್ವಜನಿ-ಖಾಸಗಿ ಸಹಭಾಗಿತ್ವದಲ್ಲಿ ಕಾಲೇಜು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.