ಹಾಸನ: ಕಾರ್ಮಿಕ, ರೈತ ಹಾಗೂ ಜನವಿರೋಧಿ ಶಾಸನಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಮತ್ತು ಸಿಡಿಪಿಓ ಜಯಕಿರಣರವರನ್ನು ಬೇರೆ ಇಲಾಖೆಗೆ ವರ್ಗಾಯಿಸಿ ಅವರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಬಂಡವಾಳಗಾರರ ಪರವಾಗಿರುವ 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಲು ಒತ್ತಾಯಿಸಿ ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಮತ್ತು ವಿದ್ಯುತ್ ಕಾನೂನು ಪ್ರತಿಗಳನ್ನು ತಮ್ಮ ತಮ್ಮ ಕೆಲಸದ ಸ್ಥಳಗಳಲ್ಲಿ ಸಾಮೂಹಿಕವಾಗಿ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೇ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತನ್ನ ಹಠಮಾರಿ ಧೋರಣೆ ಮುಂದುವರೆಸಿದ್ದು, ಇದುವರಗೂ ಏಳು ಬಾರಿ ಮಾತುಕತೆಗಳನ್ನು ರೈತ ಸಂಘಟನೆಗಳ ಜೊತೆ ನಡೆಸಿದ್ದರೂ ಅದು ಮೂರು ಕೃಷಿ ಮಸೂದೆಗಳನ್ನು ಮಾತ್ರ ವಾಪಸ್ ಪಡೆಯಲು ಸಿದ್ಧವಿಲ್ಲ ಎಂದರು. ಮೋದಿ ಸರಕಾರ ರೈತರ ಬೆಳೆಗೆ ಬೆಂಬಲ ಖಾತ್ರಿಯಾದ ಬೆಂಬಲ ಬೆಲೆ ಖಾತ್ರಿಗೊಳಿಸಲು ತಯಾರಿಲ್ಲ ಎನ್ನುವುದು ಹೀಗಾಗಿ ಕೇಂದ್ರ ಸರಕಾರದ ಈ ಗೊಸುಂಬೆತನವನ್ನು ಚೆನ್ನಾಗಿ ಬಲ್ಲ ರೈತರು ತಮ್ಮ ದೇಶವ್ಯಾಪಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿರುವುದಾಗಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಾಸನ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಶ್ರೀಮತಿ ಜಯಕಿರಣರವರ ಕರ್ತವ್ಯಲೋಪ, ಅವರ ಕೈಕೆಳಗಿನ ನೌಕರರ ಮೇಲಿನ ನಿರಂತರ ಅನುಮಾನ, ದಿನನಿತ್ಯದ ಕೆಲಸಗಳಲ್ಲಿ ಅವರ ಸಂಬಂಧಿಕರ ಹಸ್ತಕ್ಷೇಪ, ನೌಕರರ ಮೇಲೆ ವಿನಾಕಾರಣ ಸೇಡಿನ ಕ್ರಮ, ಕಿರುಕುಳ, ನೌಕರರೊಂದಿಗಿನ ಸಂವಹನದ ಕೊರತೆ ಮತ್ತು ಇತ್ಯಾದಿ ದೌರ್ಜನ್ಯಗಳಿಂದ ನೊಂದು ಬೇಸತ್ತುಹೋಗಿದ್ದಾರೆ ಎಂದರು. ಹಾಸನ ತಾಲ್ಲೂಕು ಸಿಡಿಪಿಒ ಜಯಕಿರಣರವರು ಸಂಪೂರ್ಣ ದೃಷ್ಟಿದೋಷ ಹೊಂದಿರುವ ಅಂಧ ಮಹಿಳೆಯಾಗಿದ್ದರೂ ಸಹ ಅವರ ಪರಿಶ್ರಮ ಮತ್ತು ಸಾಮಥ್ರ್ಯದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹುದ್ದೆಗೆ ನೇಮಕಗೊಂಡಿದ್ದು ಸ್ವಾಗತಾರ್ಹ ವಿಚಾರವಾಗಿದೆ. ಆದರೆ ಅವರ ವ್ಯಕ್ತಿತ್ವದ ಸ್ವಭಾವ ಮತ್ತು ನಡವಳಿಕೆಗಳು ಅತ್ಯಂತ ಜವಾಬ್ದಾರಿಯುತ ಸಿಡಿಪಿಒ ಹುದ್ದೆಗೆ ಪೂರಕವಾಗಿಲ್ಲ. ಜಯಕಿರಣರವರು ಸಿಡಿಪಿಒ ಆಗಿ ತಮ್ಮ ಕಚೇರಿ ಹಾಗೂ ಇಲಾಖೆಯ ನೌಕರರೊಂದಿಗೆ ಪ್ರೀತಿ ವಿಶ್ವಾಸಗಳೊಂದಿಗೆ ನಡೆದುಕೊಳ್ಳುತ್ತಿಲ್ಲ. ಬದಲಿಗೆ ಅವರು ಅಂಧರಾಗಿರುವುದರಿಂದ ತಮ್ಮ ಕಚೇರಿ ಮತ್ತು ಇಲಾಖೆಯ ಯಾವ ನೌಕರರ ಮೇಲೂ ವಿಶ್ವಾಸವಿಡದೆ ನಿರಂತರ ಅನುಮಾನ ಮತ್ತು ಸಂಶಯಗಳಿಂದ ನೋಡುತ್ತಿರುತ್ತಾರೆ ಎಂದು ದೂರಿದರು. ಸಿಡಿಪಿಒ ಜಯಕಿರಣರವರು ಅಂಧರಾಗಿರುವುದರಿಂದ ಅವರ ಸಹಾಯಕ್ಕೆ ಇಲಾಖೆಯು ಕಚೇರಿಯ ಒಬ್ಬ ನೌಕರರನ್ನು ನೇಮಿಸಿದ್ದರೂ ಸಹ ಜಯಕಿರಣರವರು ಇಲಾಖೆಗೆ ಯಾವುದೇ ಸಂಬಂಧವಿರದ ಖಾಸಗಿ ವ್ಯಕ್ತಿಗಳಾದ ಅವರ ತಾಯಿ, ಸಹೋಧರ ಮತ್ತು ಸ್ನೇಹಿತ ಇವರ ಸಹಾಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಸಿಡಿಪಿಓರವರ ಸಂಬಂಧಿಕರು ಈ ಅವಕಾಶ ಬಳಸಿಕೊಂಡು ಇಲಾಖೆಯ ಎಲ್ಲಾ ಕೆಲಸಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸರ್ಕಾರಿ ಕಚೇರಿಯಾದ ಹಾಸನ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸಂಪೂರ್ಣವಾಗಿ ಖಾಸಗಿ ವ್ಯಕ್ತಿಗಳ ಹಿಡಿತದಲ್ಲಿದೆ.
ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ , ತರಕಾರಿ ಮತ್ತಿತರೆ ಹಣವನ್ನು ನೀಡುತ್ತಿಲ್ಲ. ಫಲಾನುಭವಿಗಳಿಗೆ ಸೂಧಕ ಆಹಾರ ಮತ್ತು ಪೋಷಕಾಂಶಗಳನ್ನು ವಿತರಿಲಾಗುತ್ತಿಲ್ಲ, ನೌಕರರಿಗೆ ಮುಂಬಡ್ತಿ ನೀಡುತ್ತಿಲ್ಲ. ಇಲಾಖೆಯ ಆದೇಶಗಳು ಜಾರಿಯಾಗುತ್ತಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಸಮಸ್ಯೆಗಳಾದಾಗ ಸಿಡಿಪಿಓರವರು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಹಾಸನ ತಾಲ್ಲೂಕು ಸಿಡಿಪಿಒ ಜಯಕಿರಣರವರ ಸ್ವಭಾವ ಹಾಗೂ ವರ್ತನೆಗಳಿಂದಾಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನಾವುಗಳು ತೀವ್ರ ನೊಂದಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡರು.
ಕಚೇರಿ ಹಾಗೂ ಇಲಾಖೆಯನ್ನು ಸಂಪೂರ್ಣವಾಗಿ ತಮ್ಮ ಕುಟುಂಬದ ಹಿಡಿತಕ್ಕೆ ತೆಗೆದುಕೊಂಡಿರುವ ಹಾಸನ ಸಿಡಿಪಿಒ ಜಯಕಿರಣರವರನ್ನು ಕೂಡಲೇ ಸೇವೆಯಿಂದ ಅಮಾನತ್ತುಗೊಳಿಸಿ ಅವರ ದುರ್ವತ್ರನೆ, ಕರ್ತವ್ಯಲೋಪ ಮತ್ತು ಅವ್ಯವಹಾರದ ಕುರಿತು ಇಲಾಖಾ ಮಟ್ಟದ ತನಿಖೆ ನಡೆಸಬೇಕು. ತಾವು ಕೂಡಲೇ ಈ ಬಗ್ಗೆ ಪರಿಶೀಲಿಸಿ ಸಿಡಿಪಿಒ ಜಯಕಿರಣರವರನ್ನು ಬೇರೆ ಇಲಾಖೆಗೆ ಮತ್ತು ಅವರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾರ್ಮಿಕ ವಿರೋಧಿ ಹಾಗೂ ಜನವಿರೋಧಿ ಸಿಡಿಪಿಒ ವಿರುದ್ದ ಸಿಐಟಿಯು ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಜಿಲ್ಲಾ ಕಾರ್ಯದರ್ಶಿ ಅರವಿಂದ್, ಖಜಾಂಚಿ ಜಿ.ಪಿ. ಸತ್ಯನಾರಾಯಣ್, ಪೃಥ್ವಿ, ಹೆಚ್.ಆರ್. ನವೀನ್ ಕುಮಾರ್ ಇತರರು ಪಾಲ್ಗೊಂಡಿದ್ದರು.
Tags
ಹಾಸನ