ಶ್ರೀಗಂಧದ ವಸ್ತು ಸಂಗ್ರಹಾಲಯ ಲೋಕಾರ್ಪಣೆಗೊಳಿಸಿದ ಸಚಿವ ಸೋಮಶೇಖರ್

 ಮೈಸೂರು: ಶ್ರೀಗಂಧದ ವಸ್ತುಸಂಗ್ರಹಾಲಯದ ಸ್ಥಳಾಂತರದ ಚಿಂತನೆ ಇದ್ದು, ಅರಮನೆ ಮೈದಾನ ಇಲ್ಲವೇ ಮೈಸೂರು ಮೃಗಾಲಯದಲ್ಲಿ ತೆರೆಯುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಸುಲಭವಾಗಿ ಸಾರ್ವಜನಿಕರಿಗೆ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಇಲ್ಲಿನ ಅಶೋಕಪುರಂನಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀಗಂಧದ ವಸ್ತು ಸಂಗ್ರಹಾಲಯವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವರು, ಶ್ರೀಗಂಧದ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿರುವುದು ಸಂತಸದ ವಿಷಯ. ಕಳೆದ ಬಾರಿ ಭೇಟಿ ವೇಳೆ ಮೈಸೂರು ಅರಮನೆಯಲ್ಲಿ ವಸ್ತು ಸಂಗ್ರಹಾಲಯವನ್ನು ತೆರೆಯುವ ಉದ್ದೇಶ ಹೊಂದಿದ್ದಾಗಿ ತಿಳಿಸಿದ್ದೆ. ಆದರೆ, ಅಲ್ಲಿ ಸದ್ಯ ಕಟ್ಟಡದ ಕೊರತೆ ಇದ್ದಿದ್ದರಿಂದ ಅರಮನೆ ಮೈದಾನದ ಸಮಿತಿಯವರು ಕಟ್ಟಡವನ್ನು ಕಟ್ಟಿಕೊಡುವ ಬಗ್ಗೆ ಹೇಳಿದ್ದಾರೆ. ಇದೇ ವೇಳೆ ಮೈಸೂರು ಮೃಗಾಲಯದಲ್ಲೂ ಸ್ಥಳಾವಕಾಶ ಇರುವ ಬಗ್ಗೆ ಮಾಹಿತಿ ಬಂದಿದ್ದರಿಂದ ಅಲ್ಲೂ ಸಹ ಮಾತುಕತೆ ನಡೆಸಲಾಗುತ್ತಿದೆ. ಬೆಲೆಬಾಳುವ ವಸ್ತುಗಳು ಇರುವುದರಿಂದ ಸುರಕ್ಷತೆಯನ್ನು ನೋಡಿಕೊಂಡು ಸೂಕ್ತ ಸ್ಥಳದಲ್ಲಿ ತೆರೆಯುವ ನಿರ್ಧಾರವನ್ನು ಅರಣ್ಯ ಇಲಾಖೆ ಮಾಡಲಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.


ಶ್ರೀಗಂಧಕ್ಕೆ ಸರ್ಕಾರದಿಂದ ಪ್ರೋತ್ಸಾಹ ಕೊಡಲಾಗುತ್ತಿದೆ. ಅಲ್ಲದೆ, ಖಾಸಗಿಯಾಗಿ ಬೆಳೆಸಲು ಸಹ ಉತ್ತೇಜನ ನೀಡಲಾಗುತ್ತಿದೆ. ಇದಕ್ಕೆ ಉತ್ತಮ ದರ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು ಎಂದು ಹೇಳಿದ ಸಚಿವರು, ಶ್ರೀಗಂಧದ ವಸ್ತುಸಂಗ್ರಹಾಲಯವನ್ನು ಯಾರು ಬೇಕಿದ್ದರೂ ವೀಕ್ಷಣೆ ಮಾಡಬಹುದಾಗಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಸಚಿವರು ತಿಳಿಸಿದರು. ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು. 

Post a Comment

Previous Post Next Post