ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯಲ್ಲಿ ರೈತರ ಹೋರಾಟ ಬೆಂಬಲಿಸಿ ರಾಜ್ಯದಲ್ಲೂ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಲು ನಿರ್ಧರಿಸಿದ್ದಾರೆ. ಜನವರಿ 26, ಗಣರಾಜ್ಯೋತ್ಸವದಂದು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ರೈತರು ಪ್ರತಿಭಟನೆ ಹಾಗೂ ಟ್ರ್ಯಾಕ್ಟರ್ ಪರೇಡ್ ನಡೆಸಲಿದ್ದಾರೆ.
ಬೆಂಗಳೂರಿನಲ್ಲಿ ನಡೆಯಲಿರುವ ಟ್ರ್ಯಾಕ್ಟರ್ ಪರೇಡ್‌ನಲ್ಲಿ ವಿವಿಧ ಜಿಲ್ಲೆಗಳ ಸುಮಾರು 25,000 ಜನರು ಭಾಗಿಯಾಗಲಿದ್ದಾರೆ ಎಂದು ರೈತ ಸಂಘಟನೆಗಳ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ಸಿಎಂ ಕಾರ್ಯಕ್ರಮದ ಬಳಿಕ ಬೆಂಗಳೂರು ಹಾಗೂ ನೆಲಮಂಗಲದ ನಡುವಿನ ನೈಸ್ ಜಂಕ್ಷನ್‌ನಿಂದ ಟ್ರ್ಯಾಕ್ಟರ್ ಪರೇಡ್ ಬೆಂಗಳೂರು ನಗರ ಪ್ರವೇಶ ಮಾಡಲಿದೆ.
ಜಿಲ್ಲಾ ಮಟ್ಟದಲ್ಲೂ ವಿವಿಧ ಜನಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಪ್ರತಿಭಟನೆ ಹಾಗೂ ಟ್ರ್ಯಾಕ್ಟರ್ ಪರೇಡ್ ನಡೆಸಲು ನಿರ್ಧರಿಸಿವೆ. ಹಾಸನ, ಮಂಗಳೂರು, ಮಂಡ್ಯ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತ, ಕಾರ್ಮಿಕ, ಎಡಪಂಥೀಯ ಸಂಘಟನೆಗಳು ರೈತರ ಪರವಾಗಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಿದ್ದಾರೆ.