ಹಾಸನ: ಪೂರ್ಣ ಅವಧಿಗೆ ಬಿ.ಎಸ್. ಯಡಿಯೂರಪ್ಪನವರೆ ಮುಖ್ಯಮಂತ್ರಿ ಆಗಿರುತ್ತಾರೆ. ಪಕ್ಷದಲ್ಲಿ ಏನೆ ಗೊಂದಲವಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
ನಗರದ ಬಿ.ಎಂ. ರಸ್ತೆ, ಶ್ರೀಕೃಷ್ಣ ಹೋಟೆಲ್ ಬಳಿ ಏಪ್ರಿಲ್ ೧೮ ಮತ್ತು ೧೯ ರಂದು ನಡೆಯಲಿರುವ ರಾಜ್ಯ ಕರ‍್ಯಕಾರಣಿ ಸಭೆ ನಡೆಯುವ ಸ್ಥಳದ ಪೂಜ ಕಾರ್ಯಕ್ರಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಂಪೂರ್ಣ ಅವಧಿಗೆ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಹೈಕಮಾಂಡ್ ಸೂಚನೆಯಂತೆ ಎಲ್ಲರೂ ಕೆಲಸ ಮಾಡಿಕೊಂಡು ಹೋಗುತ್ತಿದ್ದು, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಯತ್ನಾಳ್ ಅವರಿಗೆ ಈಗಾಗಲೇ ನೋಟೀಸ್ ಕೊಡಲಾಗಿದೆ. ಈ ಬಗ್ಗೆ ವರಿಷ್ಠ ಮಂಡಳಿ ಎಲ್ಲವನ್ನೂ ಗಮನಿಸುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಕಮಿಷನ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರು ಏನು ಮಾತನಾಡಬೇಕು ಮಾತನಾಡಿದ್ದಾರೆ. ಶಾಸಕರಿಗೆ ಹಣ ಬಿಡುಗಡೆ ಮಾಡುವುದು ಸಿಎಂ ಪರಮಾಧಿಕಾರ. ಬಿಜೆಪಿ ಒಂದು ರಾಷ್ಟಿçÃಯ ಪಕ್ಷ, ಬಿಗಿಯಾದ ಹಿಡಿತವಿದ್ದು, ಏನೆ ಸಮಸ್ಯೆ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ಬಗೆ ಹರಿಸಿಕೊಳ್ಳುತ್ತೇವೆ ಎಂದರು. ಉಪಚುನಾವಣೆಯಲ್ಲಿ ನೂರಕ್ಕೆ ನೂರು ಮೂರು ಕ್ಷೇತ್ರಗಳಲ್ಲೂ ಹೆಚ್ಚು ಮತಗಳ ಅಂತರದಿAದ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಇದರಲ್ಲಿ ಯಾವ ಸಂಶಯವಿಲ್ಲ ಎಂದು ವಿಶ್ವಾಸವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಭಾಗಶಃ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಿದೆ. ಇನ್ನುಳಿದ ಒಂದೆರಡು ಭರವಸೆಯನ್ನು ಮಾತ್ರ ಈಡೇರಿಸಬೇಕಾಗಿದ್ದು, ಈಗಾಗಲೇ ಸಮಯ ಕೇಳಿದ್ದೇವೆ. ಉದ್ದೇಶಪೂರ್ವಕವಾಗಿ ಸರಕಾರಕ್ಕೆ ತೊಂದರೆ ಕೊಟ್ಟು ಸಾರಿಗೆ ನೌಕರರು ಮುಷ್ಕರ ಮಾಡುವುದು ಸರಿಯಲ್ಲ. ಮುಷ್ಕರದಲ್ಲಿ ಪಾಲ್ಗೊಂಡಿರುವ ನೌಕರರು ವಾಪಸ್ ಬರಬೇಕೆಂದು ನಾನು ಒತ್ತಾಯ ಮಾಡುತ್ತೇನೆ. ಕುಳಿತುಕೊಂಡು ಶಾಂತ ರೀತಿಯಿಂದ ಸರ್ಕಾರದ ಜೊತೆ ಸೌಹಾರ್ದಯುತವಾಗಿ ಮಾತನಾಡಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜನರಿಗೆ ಯಾವ ಅನಾನೂಕೂಲ ಆಗದಂತೆ ಖಾಸಗಿ ವಾಹನಗಳ ಓಡಾಟಕ್ಕೆ ಸರ್ಕಾರವೇ ಅನುಮತಿ ನೀಡಿದೆ. ಆದರೆ ನಿಗಧಿತ ಧರಕ್ಕಿಂತ ಹೆಚ್ಚಿನ ಧರವನ್ನು ವಸೂಲಿ ಮಾಡುವುದಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಂಡು ಅದಕ್ಕೆ ಬ್ರೇಕ್ ಹಾಕಲಾಗುವುದು ಎಂದು ಕಡಕ್ ಎಚ್ಚರಿಕೆ ನೀಡಿದರು. ಸಾರಿಗೆಯ ಕೆಲ ನೌಕರರು ಕೆಲಸ ಮಾಡುವುದಾಗಿ ತಾವೆ ಸ್ವತಹ ಬಂದಿರುವುದರಿAದ ಹಾಸನದಲ್ಲಿ ೮ ರಿಂದ ೧೦ ಕೆ.ಎಸ್.ಆರ್.ಟಿ.ಸಿ. ಬಸುಗಳು ಸಂಚರಿಸುತ್ತಿದೆ ಎಂದರು.
ಕಳೆದ ೫ ದಿನಗಳ ಹಿಂದೆ ಹಾಸನ ತಾಲೂಕಿನ ಮತ್ತು ಹೊಳೆನರಸೀಪುರ ತಾಲೂಕಿಗೆ ಒಳಪಡುವ ಚಾಕೇನಹಳ್ಳಿ ಗ್ರಾಮದ ಬಳಿ ಕಲ್ಲು ಸಿಡಿಸುವ ಸ್ಪೋಟಕ ವಸ್ತುಗಳು ಸ್ಪೋಟಗೊಂಡು ಇದುವರೆಗೂ ಮೂವರು ಸಾವನಪ್ಪಿದ್ದಾರೆ. ಈ ಬಗ್ಗೆ ನಾನು ಗಣಿ ಸಚಿವ ಮತ್ತು ಗೃಹ ಸಚಿವರ ಬಳಿಯೂ ಮಾತನಾಡಿದ್ದು, ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ ಎಂದರು. ಇತರೆ ಜಿಲ್ಲೆಗಳಲ್ಲಿ ಪರಿಹಾರ ನೀಡಿದಂತೆ ಹಾಸನ ಜಿಲ್ಲೆಗೂ ಮೃತ ಕುಟುಂಬಗಳಿಗೆ ಪರಿಹಾರ ಕೊಡುವ ಕೆಲಸ ಮಾಡಲಾಗುವುದು. ಈ ದುರಂತಕ್ಕೆ ಯಾರು ಸಂಬAಧಪಟ್ಟಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಈ ವಿಚಾರವಾಗಿ ಸರಕಾರವು ಯಾರ ಒತ್ತಡಕ್ಕೆ ಮಣಿಯುವುದಿಲ್ಲ. ಬಡವರಿಗೆ ಏನು ಅನ್ಯಾಯವಾಗಿದೆ ಅದಕ್ಕೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಎರಡು ದಿನಗಳ ಕಾಲ ನಡೆಯುವ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ರಾಜ್ಯದ ಆಗುಹೋಗುಗಳ ಹಾಗೂ ತಳಮಟ್ಟದಿಂದ ಪಕ್ಷ ಸಂಘಟನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಬಿಜೆಪಿ ಪಕ್ಷದ ಎಲ್ಲಾ ಪ್ರಮುಖರು ಮತ್ತು ರಾಜ್ಯದ ವಿವಿಧ ಭಾಗಗಳಿಂದ ೩೦೦ ಜನ ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿರುವರು. ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯಕ್ರಮ ಮಾಡಲಾಗುವುದು. ಆರು ಅಡಿ ಅಂತರದಲ್ಲಿ ಕುರ್ಚಿಗಳನ್ನು ಹಾಕಲಾಗುತ್ತದೆ. ಇಂದು ಸಾಂಕೇತಿಕವಾಗಿ ಟೆಂಟ್ ಹೌಸ್ ಹಾಕಲು ಗುದ್ದಲಿ ಪೂಜೆ ಮಾಡಲಾಗಿದೆ ಎಂದರು.
ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್, ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಮೈ.ವಿ. ರವಿಶಂಕರ್, ಮಾಜಿ ಅಧ್ಯಕ್ಷ ರೇಣುಕುಮಾರ್, ಬೇಲೂರು ಮಂಡಲದ ಮಾಜಿ ಅಧ್ಯಕ್ಷ ಪ್ರಕಾಶ್, ನಗರಾಧ್ಯಕ್ಷ ವೇಣುಗೋಪಾಲ್, ಐನೆಟ್ ವಿಜಯಕುಮಾರ್, ಪ್ರೀತಿವರ್ಧನ್, ಮಣಿ ಇತರರು ಪಾಲ್ಗೊಂಡಿದ್ದರು.