ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆಯಲು ನೂಕು ನುಗ್ಗಲು: ನಿಯಮ ಉಲ್ಲಂಘನೆ

 © ಹಾಸನ ಸೀಮೆ ನ್ಯೂಸ್
ಬೇಲೂರು: ಕೊರೊನಾ ಲಸಿಕೆ ಪಡೆಯಲು ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂಕುನುಗ್ಗಲು ಉಂಟಾಗಿದ್ದು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧಾರಣೆ ಸಮರ್ಪಕವಾಗಿರದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಆಸ್ಪತ್ರೆಯ ಮೇಲ್ಭಾಗದ ಕೊಠಡಿಯಲ್ಲಿ ಲಸಿಕೆ ಚುಚ್ಚುಮದ್ದು ಕೊಡಲಾಗುತ್ತಿದ್ದು ಲಸಿಕೆ ಪಡೆಯಲು ಹೆಚ್ಚಿನ ಪ್ರಮಾಣದಲ್ಲಿ ಜನ ಬರುತ್ತಿದ್ದಾರೆ. ಲಸಿಕೆ ನೀಡುವ ಕೊಠಡಿಯ ಸಮೀಪ ಆಸ್ಪತ್ರೆಯಿಂದ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಬಗ್ಗೆ ಗಮನ ಹರಿಸಬೇಕಿದೆ. ಇದರಲ್ಲಿ ಆಸ್ಪತ್ರೆ ಅಧಿಕಾರಿಗಳ ನಿರ್ಲಕ್ಷö್ಯ ಕಂಡುಬರುತ್ತಿದೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಟಿಪ್ಪುಸೇನೆಯ ತಾಲ್ಲೂಕು ಅಧ್ಯಕ್ಷ ನೂರ್‌ಅಹ್ಮದ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡುವ ಸರ್ಕಾರಿ ಆಸ್ಪತ್ರೆಯಲ್ಲೆ ಈ ರೀತಿ ನೂಕುನುಗ್ಗಲು ಉಂಟಾದರೆ ಉಳಿದ ಸ್ಥಳದಲ್ಲಿ ಯಾವ ರೀತಿ ಇರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಕನಿಷ್ಟ ಒಂದಿಬ್ಬರು ನೌಕರರನ್ನು ಲಸಿಕೆ ನೀಡುವ ಕೊಠಡಿ ಸಮೀಪ ನೇಮಕ ಮಾಡಿ ಟೋಕನ್ ನೀಡುವ ಮೂಲಕ ಸರದಿ ಸಾಲಿನಲ್ಲಿ ನಿಲ್ಲಿಸಿ ಲಸಿಕೆ ಕೊಡುವ ವ್ಯವಸ್ಥೆ ಮಾಡುವಲ್ಲಿ ಆಸ್ಪತ್ರೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ನಿಯಮ ಪರಿಪಾಲನೆ ಕುರಿತು ಸಾರ್ವಜನಿಕರಿಗೆ ಹೆಚ್ಚಿನದಾಗಿ ತಿಳುವಳಿಕೆ ನೀಡುವ ಆಸ್ಪತ್ರೆಯಲ್ಲೆ ಈ ರೀತಿ ಗುಂಪು ಗುಂಪು ಸೇರಿದರೆ, ನಿಯಮ ಉಲ್ಲಂಘನೆ ಆದರೆ ಹೇಗೆ ಎನ್ನುವುದು ಎಲ್ಲರ ಪ್ರಶ್ನೆ. ಆಸ್ಪತ್ರೆ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕಿದೆ ಎಂದು ಮನವಿ ಮಾಡಿದರು.

ಲಸಿಕೆ ಇಲ್ಲ: ಮೊದಲ ಹಂತದ ಲಸಿಕೆ ಪಡೆದವರು ಎರಡನೆ ಹಂತದ ಲಸಿಕೆ ಪಡೆಯಲು ಆಸ್ಪತ್ರೆಗೆ ಬಂದರೆ ಲಸಿಕೆ ಇಲ್ಲವೆಂದು ವಾಪಸ್ಸು ಕಳುಹಿಸಲಾಗುತ್ತಿದೆ. ನಿಯಮದ ಪ್ರಕಾರ ಮೊದಲ ಹಂತದ ಲಸಿಕೆ ಪಡೆದವರು ೨೮ ದಿನದ ನಂತರ ಎರಡನೆ ಹಂತದ ಲಸಿಕೆ ಪಡೆಯಬೇಕು. ಆದರೆ ಇಲ್ಲಿನ ಆಸ್ಪತ್ರೆಯಲ್ಲಿ ೪೮ ದಿನದ ನಂತರ ಲಸಿಕೆ ಹಾಕುವುದಾಗಿ ತಿಳಿಸಿದ್ದರು. ೪೮ ದಿನ ಕಳೆದ ನಂತರ ಆಸ್ಪತ್ರೆಗೆ ಲಸಿಕೆ ಹಾಕಿಸಿಕೊಳ್ಳಲು ಬಂದರೆ ಲಸಿಕೆ ಮುಗಿದಿದೆ ಎಂದು ತಿಳಿಸಿದ್ದಾರೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲವೆ ಎಂದು ಲಸಿಕೆ ಪಡೆದವರೊಬ್ಬರು ತಿಳಿಸಿದರು.


Post a Comment

Previous Post Next Post