ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ೩ನೇ ದಿನವು ಕೂಡ ಮುಂದುವರೆದಿದ್ದು, ಆದರೇ ಕೆಲ ಚಾಲಕರು ಕೆಲಸಕ್ಕೆ ಹಾಜರಾಗಿದ್ದರಿಂದ ಹಾಸನದಲ್ಲಿ ೧೦ಕ್ಕೂ ಹೆಚ್ಚು ಕೆ.ಎಸ್.ಆರ್.ಟಿ.ಸಿ. ಬಸ್ ಗಳು ಸಂಚರಿಸಿ ಪ್ರಯಾಣಿಕರಲ್ಲಿ ಸಂತಸ ಮೂಡಿಸಿತು.
ನಗರದ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸಿದ ಕೆ.ಎಸ್.ಆರ್.ಟಿ.ಸಿ. ಬಸುಗಳು, ಚನ್ನರಾಯಪಟ್ಟಣ, ಬೇಲೂರು, ಸಕಲೇಶಪುರ ಹಾಗೂ ಸಾಲಗಾಮೆ, ಪುರದಮ್ಮ ಇತರೆ ಭಾಗಗಳಿಗೆ ಸಾರಿಗೆ ಬಸ್ ಸಂಚರಿಸಿತು.
ಕರೆ ನೀಡಿರುವ ಕೆ.ಎಸ್.ಆರ್.ಟಿ.ಸಿ. ನೌಕರರ ಮುಷ್ಕರದ ಪ್ರಮುಖ ಬೇಡಿಕೆಗಳಾದ ಆರನೇ ವೇತನ ಆಯೋಗ ಪರಿಷ್ಕರಣೆ, ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಮೂರನೆ ದಿನವು ಕೂಡ ಯಾವ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗಲಿಲ್ಲ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲೆ ಖಾಸಗಿ ಬಸ್ ಗಳನ್ನು ನಿಲ್ಲಿಸಲಾಗಿತ್ತು. ಇನ್ನು ಎನ್.ಆರ್. ವೃತ್ತದ ಬಿ.ಎಂ. ರಸ್ತೆ ಉದ್ದಕ್ಕೂ ರಸ್ತೆ ಬದಿ ಎರಡು ಕಡೆ ಖಾಸಗಿ ವಾಹನಗಳದ್ದೆ ದರ್ಭಾರ್ ಎಂಬAತೆ ಗೋಚರಿಸುತ್ತಿತ್ತು. ಇಂತಹ ವೇಳೆ ಕೆಲ ಕೆ.ಎಸ್.ಆರ್.ಟಿ.ಸಿ. ನೌಕರರು ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡು ಕೆಲಸಕ್ಕೆ ಹಾಜರಾಗಿದ್ದರಿಂದ ಹಾಸನದಲ್ಲಿ ೮-೧೦ ಬಸುಗಳ ಓಡಾಟ ಮಾತ್ರ ಕಂಡು ಬಂದಿತು. ಸರಕಾರದ ನಿಲುವು ಬದಲಾಯಿಸಿ ನೌಕರರ ಬೇಡಿಕೆಗೆ ಸ್ಪಂದಿಸುವುದೇ, ಇಲ್ಲವೇ ಸಾರಿಗೆ ನೌಕರರು ತಮ್ಮ ನಿಲುವು ಬದಲಾಯಿಸಿ ಕೆಲಸಕ್ಕೆ ವಾಪಸ್ ಬರುತ್ತಾರಾ ಕಾದು ನೋಡಬೇಕಾಗಿದೆ.
