ಹೊಳೆನರಸೀಪುರ :- ಪಟ್ಟಣ ಮತ್ತು ತಾಲ್ಲೂಕಿನ ದಲಿತರ ಹತ್ತಾರು ವರ್ಷಗಳ ಪ್ರಮುಖ ಬೇಡಿಕೆಯಾಗಿದ್ದ ತಾಲ್ಲೂಕು ಮಟ್ಟದ ಡಾ|| ಬಿ.ಆರ್ ಅಂಬೇಡ್ಕರ್ ಭವನ ಮೂರು ಕೋಟಿ, ಐವತ್ತು ಲಕ್ಷ (೩.೫೦ ಕೋಟಿ) ರೂ ವೆಚ್ಚದಲ್ಲಿ ಪಟ್ಟಣದ ಹಾಸನ-ಮೈಸೂರು ರಸ್ತೆ ಬಳಿ ಹಾಗೂ ಹಳೆ ಗ್ರಾಮಾಂತರ ಪೋಲಿಸ್ ಠಾಣೆ ಪಕ್ಕದಲ್ಲಿ ನಿರ್ಮಾಣವಾಗಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.
ಅವರು ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಡಾ|| ಬಿ.ಆರ್ ಅಂಬೇಡ್ಕರ್ ಭವನದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಟೇಪು ಕಟ್ ಮಾಡುವುದರ ಮೂಲಕ ಉದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಆಡಳಿತ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮೋಧನೆ ನೀಡಲಾಗಿತ್ತು ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಶಾಸಕರ ಹಾಗೂ ಲೋಕಸಭಾ ಸದಸ್ಯರ ನಿಧಿಯಿಂದಲ್ಲೂ ಧನಸಹಾಯ ಮಾಡಲಾಗಿದೆ ಎಂದರು. ಈ ಕಟ್ಟಡದ ನಿರ್ವಹಣೆಯನ್ನು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕಾರ್ಯದರ್ಶಿಯಾಗಿ, ಇತರೆ ಇಲಾಖೆಗಳು, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ತಾ.ಪಂ.ಅಧ್ಯಕ್ಷರು ಕಮಿಟಿಯಲ್ಲಿ ಇದ್ದು, ಕಾರ್ಯ ನಿರ್ವಹಿಸುತ್ತಾರೆ. ಮಕ್ಕಳ ಭವಿಷ್ಯದ ದೃಷ್ಠಿಯಿಂದ ಈ ಭವನದಲ್ಲಿ ಸಸ್ಯಹಾರಿ ಅಡಿಗೆ ಮಾತ್ರ ಅವಕಾಶ ಕಲ್ಪಿಸಲು ಇತ್ತೀಚೆಗೆ ಜರುಗಿದ ತಾ. ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ ಮತ್ತು ಕಟ್ಟಡದ ನಿರ್ವಹಣೆಗಾಗಿ ಅಲ್ಪಮಟ್ಟದ ಬಾಡಿಗೆ ನಿಗಧಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಭವನವು ವಿಶಾಲವಾದ ವಿಸ್ತೀರ್ಣ ಹೊಂದಿದ್ದು, ಸುಸಜ್ಜಿತವಾದ ಅಡಿಗೆ ಕೋಣೆ ವಧು-ವರರ ಕೊಠಡಿಗಳು, ೧೦ ಕ್ಕೂ ಹೆಚ್ಚು ವಿಶ್ರಾಂತಿ ಕೊಠಡಿಗಳು, ಶೌಚಾಲಯ,ವಿದ್ಯುತ್ ದೀಪದ ಅಲಂಕಾರ, ಜನರೇಟರ್ ಸಮರ್ಪಕವಾದ ಕುಡಿಯುವ ನೀರು ಕಟ್ಟಡದ ಸುತ್ತಲು ದ್ವಿಚಕ್ರ ವಾಹನ ನಿಲುಗಡೆಗೆ ಹೊಂದಿದ್ದು, ಇದನ್ನು ದುರುಪಯೋಗಪಡಿಸಿಕೊಳ್ಳದೆ ಸರಿಯಾದ ರೀತಿಯಲ್ಲಿ ಶುಭ ಸಮಾರಂಭಗಳಿಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ, ತಾ.ಪಂ.ಅಧ್ಯಕ್ಷೆ ರಾಜೇಶ್ವರಿ ಪುರಸಭಾಧ್ಯಕ್ಷೆ ಸಿ.ಜೆ.ವೀಣಾ, ಉಪಾಧ್ಯಕ್ಷೆ ತ್ರಿಲೋಚನಾ, ತಾ.ಪಂ. ಉಪಾಧ್ಯಕ್ಷ ಜವರೇಗೌಡ, ತಾ.ಪಂ. ಇಒ ಕೆ.ಯೋಗೇಶ್, ಜಿ.ಪಂ. ಇಂಜಿನಿಯರ್ ಪ್ರಭು, ಬಿಸಿಎಂ ಅಧಿಕಾರಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ಲಿಂಗು, ವಲಯ ಅರಣ್ಯಾಧಿಕಾರಿ ಲಕ್ಮಿಕಾಂತ್, ಡಿಪ್ಲೋಮ ಕಾಲೇಜಿನ ಉಪನ್ಯಾಸಕ ಎನ್. ಆರ್ ಶಿವರಾಂ, ಬಿಇಒ ಯೋಗೇಶ್, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಶಾಂತಲಾ, ಪುರಸಭೆ ಮಾಜಿ ಅಧ್ಯಕ್ಷ ಲಕ್ಷö್ಮಣ, ಜಿ.ಪಂ. ಮಾಜಿ ಸದಸ್ಯ ಎಚ್.ವೈ.ಚಂದ್ರಶೇಖರ್, ಪುರಸಭೆ ಹಾಗೂ ತಾ.ಪಂ. ಸದಸ್ಯರು, ಇತರರು ಇದ್ದರು.


