ಹಾಸನ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು 2020-21ನೇ ಶೈಕ್ಷಣಿಕ ಸಾಲಿಗೆ ಹತ್ತು ಸೆಟ್ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡ ಪ್ರಶ್ನಾಕೋಠಿಯನ್ನು ಸಿದ್ಧಪಡಿಸಿ ಬಿಡುಗಡೆಗೊಳಿಸಿರುವುದು ಸ್ವಾಗತಾರ್ಹ ಸಂಗತಿ. ಈ ಪ್ರಶ್ನಾಕೋಠಿಯನ್ನು ಜಿಲ್ಲೆಯ ಎಲ್ಲಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಹತ್ತನೇ ತರಗತಿ ವಿದ್ಯಾರ್ಥಿಗಳು ಇದರ ಗರಿಷ್ಠ ಪ್ರಮಾಣದ ಸದುಪಯೋಗ ಮಾಡಿಕೊಳ್ಳಬೇಕು. ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ವಿದ್ಯಾರ್ಥಿಗಳನ್ನು ಸಮರ್ಥವಾಗಿ ಸಿದ್ಧಗೊಳಿಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಬೆಂಗಳೂರು ನಿರ್ದೇಶಕರಾದ ಮಾರುತಿ ರವರು ನಿರ್ದೇಶನ ನೀಡಿದರು.
ಹಾಸನದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಏರ್ಪಾಡಾಗಿದ್ದ ಪ್ರಶ್ನಾಕೋಠಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಕೋವಿಡ್-19ರ ಹಿನ್ನೆಲೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್.ಎಸ್.ಎಲ್.ಸಿ. ಪಠ್ಯ ವಸ್ತುವನ್ನು ಕಡಿತಗೊಳಿಸಿರುವ ಪ್ರಯುಕ್ತ ಪ್ರಸಕ್ತ ಸಾಲಿಗೆ ಹಾಸನ ಡಯಟ್ ನೂತನ ಪ್ರಶ್ನೆ ಪತ್ರಿಕೆಗಳನ್ನು, ಆರು ವಿಷಯಗಳಲ್ಲಿ ಸಿದ್ಧಪಡಿಸಿದೆ. ಇದು ಉತ್ತಮ ದಾಖಲೆಯಾಗಿದ್ದು ಯಶೋಗಾಥೆಯೆನಿಸುತ್ತದೆ. ನೋಡಲ್ ಅಧಿಕಾರಿಗಳು ಶಾಲೆಗೆ ನಿಯಮಿತವಾಗಿ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡುವಂತೆ ಸೂಚಿಸಿದರು.
ಹಾಸನದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಡಿ.ಟಿ. ಪುಟ್ಟರಾಜು ರವರು ಮಾತನಾಡಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಫಲಿತಾಂಶ ಸಾಧಿಸಲು ಹತ್ತು ಸೆಟ್ ಪ್ರಶ್ನೆ ಪತ್ರಿಕೆಗಳ ಪ್ರಶ್ನಾಕೋಠಿಯನ್ನು ಸಿದ್ಧಪಡಿಸಲಾಗಿದೆ. ಈ ಸಂಬಂಧ ಸಂಪನ್ಮೂಲ ಶಿಕ್ಷಕರ ತಂಡಕ್ಕೆ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿ ಮಂಡಳಿ ನೀಡಿರುವ ಸುತ್ತೋಲೆಯನ್ವಯ ಎಲ್ಲಾ ವಿಷಯಗಳಲ್ಲೂ ಪ್ರಶ್ನೆ ಪತ್ರಿಕೆಗಳನ್ನು ರಚಿಸಲು ತಿಳಿಸಲಾಯಿತು. ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಶಿಕ್ಷಕರು ಇದನ್ನು ಬಳಸಿಕೊಳ್ಳಲು ನಿರ್ದೇಶಿಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಡಯಟ್ ನ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.
Tags
ಹಾಸನ
