ಹಾಸನ: ಕೊರೋನಾ ಸೋಂಕು ಹರಡುವ ಹಿನ್ನಲೆಯಲ್ಲಿ ಸರಕಾರ ಜಾರಿಗೆ ತರಲಾಗಿರುವ ಕರ್ಪ್ಯೂನಲ್ಲಿ ವಾರದ ಕೊನೆಯ ಎರಡು ದಿನದ ವೀಕೆಂಡ್ ಕರ್ಪ್ಯೂನಲ್ಲಿ ಗೊಂದಲ ಉಂಟಾಗಿ ಸಣ್ಣ ಸಣ್ಣ ವ್ಯಾಪಾರಿಗಳು ಪರದಾಡುವ ಪರಿಸ್ಥಿತಿ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಹಾಗೂ ಸುತ್ತ ಮುತ್ತ ಬಂದಿದೆ.
ಸರಕಾರದ ನಿಯಮಗಳು ಕೂಡ ಆಗಾಗ್ಗೆ ಬದಲಾವಣೆ ಆಗುತ್ತಿರುವುದನ್ನು ಸಣ್ಣ ವ್ಯಾಪಾರಿಗಳಿಗೆ ಸರಿಯಾಗಿ ಮಾಹಿತಿ ಲಭ್ಯವಾಗದೇ ಶನಿವಾರ ಬೆಳಿಗ್ಗೆ ಸುಮಾರು ೭ ಗಂಟೆಯ ಸಮಯದಲ್ಲಿ ಏಕಾಏಕಿ ಅಂಗಡಿ-ಮುಗ್ಗಟನ್ನು ಮುಚ್ಚುವಂತೆ ನಗರಸಭೆ, ಪೊಲೀಸ್ ಹಾಗೂ ಮಾರ್ಷಲ್ಸ್ ಸಿಬ್ಬಂದಿಗಳು ಮುಂದಾದರು. ಬೆಳಿಗ್ಗೆ ೬ ರಿಂದ ೧೦ ಗಂಟೆಯವರೆಗೂ ವ್ಯಾಪಾರ ಮಾಡಲು ಅವಕಾಶ ಇರುವಾಗ ಯಾವ ಮಾಹಿತಿ ನೀಡದೆ ಹೀಗೆ ನಮ್ಮ ಅಂಗಡಿಗಳನ್ನು ಮುಚ್ಚಿಸಿದರೇ ಬಂಡವಾಳ ಹಾಕಿರುವ ಸಣ್ಣ ವ್ಯಾಪಾರಿಗಳ ಪಾಡೇನು ಎಂದು ಪ್ರಶ್ನೆ ಮಾಡಿದರು. ಯಾರ ಮಾತನ್ನು ಕೇಳದೇ ಬಾಗಿಲು ಹಾಕಿಸಿದರು. ನಂತರದಲ್ಲಿ ಮತ್ತೆ ಬಾಗಿಲು ತೆಗೆದುಕೊಳ್ಳಿ ಎಂದು ಬಂದು ಹೇಳಲಾಯಿತು. ಸರಿಯಾದ ಮಾಹಿತಿ ಅಧಿಕಾರಿಗಳಿಗೆ ಲಬ್ಯವಾಗದೆ ಸಣ್ಣ ವ್ಯಾಪಾರಿಗಳು ಗೊಂದಲದಲ್ಲಿ ಸಿಲುಕಬೇಕಾಯಿತು. ಹಾಸನ ನಗರದ ಅನೇಕ ಕಡೆ ಹೋಟೆಲ್, ಇತರೆ ಅಂಗಡಿಯನ್ನು ರಾಜರೋಷವಾಗಿಯೇ ತೆಗೆದು ವ್ಯಾಪಾರ ಮಾಡುತ್ತಿದ್ದರೂ ಯಾರು ಕೇಳುವರಿಲ್ಲ. ಆದರೇ ಚಿಕ್ಕ ವ್ಯಾಪಾರಸ್ತರನ್ನು ಮಾತ್ರ ಬಾಗಿಲು ಹಾಕಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪವ್ಯಕ್ತವಾಗಿದೆ.