ಬೇಲೂರು ತಾಲ್ಲೂಕು ಬಿಕ್ಕೋಡು ಗ್ರಾಮದಲ್ಲಿ ಒತ್ತುವರಿ
ಆಗಿದ್ದಂತಹ ಸ್ಮಶಾನದ ಭೂಮಿಯನ್ನು ಸರ್ವೆ
ಮಾಡಿರುವುದು
ಬೇಲೂರು:
ಕಳೆದ 30 ವರ್ಷದಿಂದ ಇದ್ದ ತಾಲ್ಲೂಕಿನ ಬಿಕ್ಕೋಡು ಗ್ರಾಮದ
ಸ್ಮಶಾನದ ಸ್ಥಳ ವಿವಾದ ಬಗೆಹರಿಯುವ ಲಕ್ಷಣಗಳು
ಗೋಚರಿಸುತ್ತಿದೆ.
ಸ್ಮಶಾನದ ಸ್ಥಳ ಒತ್ತುವರಿ ಆಗಿರುವ ಬಗ್ಗೆ ಕಂದಾಯ
ಇಲಾಖೆ, ಬಿಕ್ಕೋಡು ಗ್ರಾಮ ಪಂಚಾಯಿತಿ, ಜನಪ್ರತಿನಿಧಿಗಳು
ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಇಂದು ಸರ್ವೆ
ನಡೆಸಲಾಯಿತು. ಈ ವೇಳೆ ಸ್ಮಶಾನದ ಸ್ಥಳವನ್ನು ಒತ್ತುವರಿ
ಮಾಡಿರುವುದು ಕಂಡುಬಂತು. ಈ ಸಂದರ್ಭ ಮಾತನಾಡಿದ ಉಪ
ತಹಸೀಲ್ದಾರ್ ಜಿ.ಕೆ.ಪ್ರದೀಪ್, ಸರ್ಕಾರದ ಆದೇಶದಂತೆ ಕೆರೆ,
ಕಟ್ಟೆ, ಸ್ಮಶಾನದ ಭೂಮಿಯನ್ನು ಒತ್ತುವರಿ ಮಾಡುವುದು
ಅಪರಾಧವಾಗುತ್ತದೆ.
ಬಿಕ್ಕೋಡು ಗ್ರಾಮದ ಸರ್ವೆ ನಂಬರ್ 50 ರಲ್ಲಿ
ಸಾರ್ವಜನಿಕರ ಅನುಕೂಲಕ್ಕಾಗಿ ಸ್ಮಶಾನದ ಭೂಮಿಯನ್ನು
ಗುರುತು ಮಾಡಲಾಗಿದೆ. ಆದರೆ ಕೆಲವರು ಈ ಭೂಮಿಯನ್ನು
ಒತ್ತುವರಿ ಮಾಡಿರುವುದು ಸರ್ವೆ ನಂತರ ಗೊತ್ತಾಗಿದೆ. ಒತ್ತುವರಿ
ಮಾಡಿರುವವರು ಕೂಡಲೆ ತೆರವುಗೊಳಿಸಿಕೊಡಬೇಕಿದೆ.
ತೆರವುಗೊಳಿಸದೆ ಇದ್ದಲ್ಲಿ ಅಂತಹವರ ಮೇಲೆ ಕಾನೂನು ರೀತಿ
ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸರ್ವೆ ಮಾಡಿ ಗುರುತಿಸಿಕೊಟ್ಟಿರುವ ಸ್ಥಳಕ್ಕೆ
ಪಂಚಾಯಿತಿಯಿಂದ ಬೇಲಿ ನಿರ್ಮಿಸಿಕೊಡಲಾಗುವುದು ಎಂದು ಗ್ರಾ.ಪಂ.ಸದಸ್ಯ ಕುಮಾರ್ ತಿಳಿಸಿದರು.
ಸರ್ವೆ ಸಂದರ್ಭ ರಾಜಸ್ವ ನಿರೀಕ್ಷಕ ಅಸ್ಲಾಂಪಾಷ, ತಾಲ್ಲೂಕು
ಸರ್ವೆಯರ್ ಸಚಿನ್, ಗ್ರಾ.ಪಂ.ಕಾರ್ಯದರ್ಶಿ ದೇವರಾಜ್, ಗ್ರಾಮ
ಲೆಕ್ಕಾಧಿಕಾರಿ ಮಮತಾ, ಗ್ರಾ.ಪಂ.ಸದಸ್ಯರಾದ ಪುಟ್ಟರಾಜು,
ಸಿ.ಕುಮಾರ್, ಗ್ರಾಮಸ್ಥರಾದ ಚೇತನ್‍ಕುಮಾರ್, ಸುರೇಶ್,
ಮಂಜುನಾಥ್, ವೆಂಕಟೇಶ್, ಯೋಗೇಶ್ ಇತರರು ಇದ್ದರು.