ಹಾಸನ ಮೇ 27 :- ದಿನೇ ದಿನೇ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಡಿತರ ವ್ಯವಸ್ಥೆಯಲ್ಲಿ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮೇ ಮತ್ತು ಜೂನ್ ತಿಂಗಳು ಆಹಾರ ಧಾನ್ಯಗಳನ್ನು ಹೆಚ್ಚುವರಿಯಾಗಿ ವಿತರಣೆ ಮಾಡುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾದ ಉಮೇಶ್ ಕತ್ತಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು ಪ್ರಧಾನ ಮಂತ್ರಿ ಗರಿಬ್ ಯೋಜನೆಯಡಿಯಲ್ಲಿ ಮೇ ಹಾಗೂ ಜೂನ್ ತಿಂಗಳ ಬಿ. ಪಿ.ಎಲ್ ಕಾರ್ಡ್ದಾರರಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದು ಹಾಗೂ ಎ. ಪಿ.ಎಲ್ ಕಾರ್ಡ್ದಾರರಿಗೆ 10 ಕೆ.ಜಿಯನ್ನೂ 15 ರೂಗಳಂತೆ ವಿತರಣೆ ಮಾಡುವಂತೆ ತಿಳಿಸಿದರು.
ಪಡಿತರ ಪಟ್ಟಿಯಲ್ಲಿ ವಿತರಣೆಯಾಗುತ್ತಿರುವುದನ್ನು ಹೊರತು ಪಡಿಸಿ ಹೆಚ್ಚುವರಿಯಾಗಿ ಘೋಷಣೆ ಮಾಡಿರುವ ಪಡಿತರವು ಸರಿಯಾಗಿ ವಿತರಣೆಯಾಗುತ್ತಿಲ್ಲ ಇದರ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನವಹಿಸಿ ಸರಿಯಾಗಿ ವಿತರಣೆಯಾಗುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ತಿಳಿಸಿದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಅವರು ಮಾತನಾಡಿ ಅನರ್ಹ ಪಡಿತರ ಚೀಟಿಗಳ ರದ್ದತಿಗೊಳಿಸುವ ಬಗ್ಗೆ ಹೆಚ್ಚಿನ ನಿಗಾವಹಿಸಿ ಆದ್ಯತಾ ಪಡಿತರ ಚೀಟಿಗಳನ್ನು ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುವ ಪಡಿತರ ಹಾಗೂ ದಾಸ್ತನುಗಳ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳುವಂತೆ ಸೂಚಿಸಿದರಲ್ಲದೆ ಪಡಿತರವನ್ನು ನೀಡುವುದಕ್ಕೆ ಸಮಯ ನಿಗದಿಗೊಳಿಸದೆ ಮೊದಲಿನ ಹಾಗೆಯೇ ವಾರಪೂರ್ತಿ ಸಾರ್ವಜನಿಕರಿಗೆ ಪಡಿತರ ನೀಡುವಂತೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ದಿನೇ ದಿನೇ ಕೋವಿಡ್ ಹೆಚ್ಚಳ ವಾಗುತ್ತಿರುವ ಹಿನ್ನೆಯಲ್ಲಿ ಬಯೋ ಮೆಟ್ರಿಕ್ ಬದಲಾಗಿ ಆಧಾರ್ ಕಾರ್ಡ್ ಪರಿಗಣಿಸಿ ಸಾರ್ವಜನಿಕರಿಗೆ ಪಡಿತರ ವಿತರಣೆ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಪುಟ್ಟಸ್ವಾಮಿ, ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಜಿಲ್ಲಾ ವ್ಯವಸ್ಥಾಪಕರಾದ ಅನುರಾಧ ಹಾಗೂ ಮತ್ತಿತರು ಹಾಜರಿದ್ದರು.