ಕೋವಿಡ್ ಕೇರ್ ಕೇಂದ್ರ ತೆರೆಯಲು ಶ್ರೀಮಠದ ವಸತಿ ಸಂಕೀರ್ಣ ಕಟ್ಟಡ ಹಾಗೂ ಆಂಬುಲೆನ್ಸ್ ಸೇವೆ ಒದಗಿಸಿದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಶ್ರವಣಬೆಳಗೊಳ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಕೋವಿಡ್ ಆರೈಕೆ ಕೇಂದ್ರವನ್ನು ತೆರೆಯಲು ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರ್‌ರವರು ಬರೆದ ಪತ್ರದ ಮೇರೆಗೆ ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನ ಮಠದ ಎ ಮತ್ತು ಡಿ ಬ್ಲಾಕ್ ಕಟ್ಟಡಗಳ 200 ಕೊಠಡಿಗಳನ್ನು ಸೂಕ್ತ ವ್ಯವಸ್ಥೆಗಳೊಂದಿಗೆ ಮೇ 18 ರಂದು ಕಂದಾಯ ಇಲಾಖೆಗೆ ವಹಿಸಲಾಗಿರುತ್ತದೆ ಎಂದು ಎಸ್‌ಡಿಜೆಎಂಐಎಂಸಿ ಟ್ರಸ್ಟ್ ನ ಮುಖ್ಯ ಕಾರ್ಯದರ್ಶಿ ಎಸ್.ಪಿ.ಮಹೇಶ್ ತಿಳಿಸಿದರು.
 
ಸದ್ಯ ಇಲ್ಲಿ 300 ಜನ ಸೋಂಕಿತರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ನೀರು, ವಿದ್ಯುತ್ ಇತ್ಯಾದಿ ನಿರ್ವಹಣೆಗೆ ಸಿಬ್ಬಂದಿಯವರನ್ನು ನಿಯೋಜಿಸಲಾಗಿದೆ ಹಾಗೂ ಕ್ಷೇತ್ರದ ವತಿಯಿಂದ ಕೋವಿಡ್ ಸೆಂಟರ್‌ನ ಉಪಯೋಗಕ್ಕೆ ಒಂದು ಅಂಬುಲೆನ್ಸ್ ವಾಹನವನ್ನು ಉಚಿತವಾಗಿ ನೀಡಲಾಗಿದೆ. ಜವೇರಿ ಧರ್ಮಶಾಲೆಯ ಕಟ್ಟಡದಲ್ಲಿ ಕೊಠಡಿಗಳನ್ನು ಪೀಠೋಪಕರಣಗಳ ವ್ಯವಸ್ಥೆಯೊಂದಿಗೆ ಲಸಿಕಾ ಕೇಂದ್ರವನ್ನು ತೆರೆಯಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ವಹಿಸಲಾಗಿದ್ದು, ಜಿಲ್ಲಾಡಳಿತಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಶ್ರವಣಬೆಳಗೊಳ ಜೈನ ವ್ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ನಿರ್ದೇಶನ ನೀಡಿರುತ್ತಾರೆ ಎಂದು ಹೇಳಿದರು.
 
ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದ ಪ್ರಕಾರ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಶ್ರೀ ವಿಂಧ್ಯಗಿರಿ, ಭಂಡಾರಿ ಬಸ್ತಿ, ಶ್ರೀಮಠದ ಬಸದಿಗಳನ್ನು ಪ್ರತಿ ದಿನ ಬೆಳಗ್ಗೆ ನಿತ್ಯ ಪೂಜೆ ಮುಗಿಸಿ ಬಾಗಿಲು ಮುಚ್ಚಲಾಗುವುದು. ಕ್ಷೇತ್ರದಲ್ಲಿ ಉಳಿದ 40 ದೇವಸ್ಥಾನಗಳ ಪೂಜೆಯನ್ನು ಸ್ಥಗಿತಗೊಳಿಸಲಾಗಿದೆ ಹಾಗೂ ವಸತಿ ವಿಭಾಗ ಮತ್ತು ಭೋಜನಾಲಯಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. 

ಕ್ಷೇತ್ರದ ಸಿಬ್ಬಂದಿ ಮತ್ತು ಇತರರಿಗೆ 200 ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ನೀಡಲಾಗಿದೆ ಹಾಗೂ 300 ಫೇಸ್‌ಶೀಲ್ಡ್, ಮಾಸ್ಕ್ ಮತ್ತು ಸ್ಯಾನಿಟೈಜರ್‌ಗಳನ್ನು ಅಗತ್ಯವಿದ್ದ ಇಲಾಖೆಗಳಿಗೆ ಕ್ಷೇತ್ರದ ವತಿಯಿಂದ ನೀಡಲಾಗಿದೆ ಎಂದು ತಿಳಿಸಿದರು.
 
ಈ ಸಂದರ್ಭದಲ್ಲಿ ಕೋವಿಡ್ ಕೇರ್ ಕೇಂದ್ರದ ನೋಡಲ್ ಅಧಿಕಾರಿಗಳಾದ ಸೋಮನಾಥ್, ಡಾ. ಬಿ.ಆರ್.ಯುವರಾಜ್, ಕಂದಾಯ ನಿರೀಕ್ಷಕ ಕೆ.ಪಿ.ರಮೇಶ್, ಪಿಡಿಒ ನಾಗೇಶ್, ಡಾ. ನರೇಂದ್ರ ಬಾಬು, ಗ್ರಾಮ ಲೆಕ್ಕಾಧಿಕಾರಿ ನವೀನ್, ಎಸ್.ಆರ್.ರಮೇಶ್, ಎಸ್.ಮಹಾದೇವ, ರೋಹಿತ್, ಕುಮಾರ್, ಅತೀಕ್, ಶ್ರೀಮಠದ ಸಿಬ್ಬಂದಿ ಕೆ.ಎನ್.ಹುಚ್ಚೇಗೌಡ, ಧರಣೇಂದ್ರ ಮುಂತಾದವರಿದ್ದರು.

Post a Comment

Previous Post Next Post