ಹಾಸನ ಮೇ 24 :- ಆಂದೋಲನ ರೀತಿಯಲ್ಲಿ ಲಸಿಕೆ ನೀಡಿ ಲಸಿಕಾ ಕಾರ್ಯವನ್ನು ಚುರುಕುಗೊಳಿಸಿ ಎಂದು ರಾಜ್ಯ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾದಿಕಾüರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ರಾಜ್ಯದ್ಯಾಂತ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ರ‍್ಯಾಟ್ ಮೂಲಕ ಕೋವಿಡ್ ಪರೀಕ್ಷೆ ಹೆಚ್ಚಿಸಿ ಕೊರೋನಾ ತಡೆಗಟ್ಟಿ ಶೀಘ್ರವಾಗಿ ಜಿಲ್ಲೆಗಳಿಗೆ ಲಸಿಕೆಗಳನ್ನು ಕಳುಹಿಸಲಾಗುವುದು ಲಸಿಕೆ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿ ಎಂದರು
ಅಭಿವೃದ್ದಿ ಆಯುಕ್ತರಾದ ವಂದಿತ ಶರ್ಮಾ ಅವರು ಮಾತನಾಡಿ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಲಸಿಕೆ ಬಗ್ಗೆ ಹೆಚ್ಚಿನ ಗಮನವಹಿಸುವುದರ ಜೊತೆಗೆ ಇತ್ತಿಚಿಗೆ ಪತ್ತೆಯಾಗುತ್ತಿರುವ ಬ್ಲಾಕ್ ಫಂಗಸ್, ವೈಟ್ ಫಂಗಸ್ ಬಗ್ಗೆಯೂ ತೀವ್ರ ನಿಗಾವಹಿಸಿ ಎಂದರು.
ಜೂನ್ ಕೊನೆಯವರೆಗೂ ಲಸಿಕೆ ಪೂರೈಕೆಯಲ್ಲಿ ಏರಿಳಿತಗಳುಂಟಾಗಲಿದೆ ನಂತರ ಹೆಚ್ಚಿನ ಪೂರೈಕೆಯಾಗುವಲ್ಲಿ ಯಾವುದೇ ರೀತಿಯ ಕೊರತೆಗಳಾಗುವುದಿಲ್ಲ ಎಂದು ಕಡಿಮೆ ಲಸಿಕೆ ನೀಡಿರುವ ಜಿಲ್ಲೆಗಳು ಶೀಘ್ರವಾಗಿ ಗುರಿ ಸಾಧಿಸುವಂತೆ ಸೂಚಿಸಿದರಲ್ಲದೆ ಮುಂದಿನ ದಿನಗಳಲ್ಲಿ ಮೂರನೇ ಅಲೆಯೂ ರಾಜ್ಯಕ್ಕೆ ಅಪ್ಪಳಿಸುವ ಮೂನ್ಸೂಚನೆ ಇದ್ದು ಪ್ರತಿಯೊಬ್ಬರೂ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದರು.
ಎಲ್ಲಾ ಆರೋಗ್ಯ ಕಾರ್ಯಕರ್ತೆಯರು ಆಶಾ, ಅಂಗನವಾಡಿ ಕಾರ್ಯಕರ್ತೆಯರೂ ಹಾಗೂ ವೃದ್ದಾಶ್ರಮಗಳಲ್ಲಿರುವವರಿಗೆ ಹಾಗೂ ವಿಕಲಚೇತನರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ವಿಡಿಯೋ ಸಂವಾದ ನಂತರ ಮಾತನಾಡಿ ಎಲ್ಲಾ ಆರೋಗ್ಯ ಕಾರ್ಯಕರ್ತೆಯರಿಗೆ ಸಂಪೂರ್ಣವಾಗಿ ಲಸಿಕೆ ಪಡೆದುಕೊಳ್ಳುವಂತೆ ಸೂಚಿಸಿ ಎಂದರಲ್ಲದೆ ಮೊದಲನೇ ಡೋಸ್ ಲಸಿಕೆ ಪಡೆದವರು ನಿಗದಿತ ಸಮಯದಲ್ಲಿ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಳ್ಳಿ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಆರ್.ಸಿ.ಎಚ್ ಅಧಿಕಾರಿ ಡಾ|| ಕಾಂತರಾಜ್, ಔಷಧ ನಿಯಂತ್ರ‍್ರಕರಾದ ಡಾ|| ಗಿರೀಶ್ ಮತ್ತಿತರರು ಹಾಜರಿದ್ದರು.