ಬೇಲೂರು : ರಾಜ್ಯ ಸರ್ಕಾರ ಘೋಷಿಸಿದ ವಿಶೇಷ ಪ್ಯಾಕೇಜ್ನಲ್ಲಿ ಛಾಯಾಗ್ರಹಣ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿದ್ದು ಸ್ಟುಡಿಯೋ ಮಾಲೀಕರು ಹಾಗೂ ಕಾರ್ಮಿಕರ ಸ್ಥಿತಿ ಮೂರಾಬಟ್ಟೆಯಾಗಿದೆ .
ಅಸಂಘಟಿತ ವಲಯಗಳಿಗೆ, ರೈತರಿಗೆ, ಸುಮಾರು 1,250 ಕೋಟಿ ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡಿದೆ. ಆದರೆ ಕಳೆದ ಹಾಗೂ ಪ್ರಸಕ್ತ ವರ್ಷ ಲಾಕ್ ಡೌನ್ ಸಂದರ್ಭ ಕೆಲಸವಿಲ್ಲದೇ ಖಾಲಿ ಕುಳಿತಿರುವ ಛಾಯಾಗ್ರಾಹಕರಿಗೆ ನಯಾಪೈಸೆ ಪರಿಹಾರ ನೀಡಿಲ್ಲ . ಕೆಲವರಿಗೆ ಫೋಟೋ ವಿಡಿಯೋ ವೃತ್ತಿ ಬಿಟ್ಟರೆ ಬೇರೆ ಯಾವುದೇ ಕೆಲಸ ಮಾಡಲು ಗೊತ್ತಿಲ್ಲ .
ದರ ಪೈಪೋಟಿ ನಡುವೆ ಕೊರೊನಾ ೨ ನೇ ಅಲೆಯ ಹೊಡೆತಕ್ಕೆ ಸ್ಟುಡಿಯೋದವರು ಹೈರಾಣಾಗಿದ್ದಾರೆ . ಸಾಮಾನ್ಯವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಶುಭ ಸಮಾರಂಭಗಳು ಹೆಚ್ಚಿರುತ್ತವೆ . ಆದರೆ ಈಗ ಮದುವೆ ಮತ್ತು ಇತರೆ ಶುಭ ಕಾರ್ಯಕ್ರಮಗಳು ರದ್ದಾಗಿವೆ . ಲಾಕ್ ಡೌನ್ ನಿಂದ ಸ್ಟುಡಿಯೋ ಬಾಗಿಲು ಮುಚ್ಚಿದ್ದು ವ್ಯಾಪಾರ್ ಬಂದ್ ಆಗಿ ಪಾಸ್ ಪೋರ್ಟ್ ಫೋಟೋ ತೆಗೆಯಲು ಆಗುತ್ತಿಲ್ಲ. ಕೆಲವರು ಈ ಸಂದರ್ಭದಲ್ಲಿ ತರಕಾರಿ ಮಾರಾಟಕ್ಕಿಳಿದರೆ, ಕೆಲವರು ಗಾರೆ ಕೆಲಸಕ್ಕೆ ಹೋಗುತ್ತಿದ್ದಾರೆ.
ಎಸ್ ಎಲ್ ಆರ್ ಸ್ಟುಡಿಯೋ ಮಾಲೀಕ ಪುರುಷೋತ್ತಮ ಮಾತನಾಡಿ ನೂತನ ತಂತ್ರಜ್ಞಾನದ ಕ್ಯಾಮೆರಾಗಳಿಗೆ ಲಕ್ಷಾಂತರ ರೂ ಬಂಡವಾಳ ಹಾಕಲಾಗಿದೆ . ವೀಡಿಯೋಗೆ ಸಂಬಂಧಪಟ್ಟ ಪರಿಕರಗಳು ,ಕ್ರೈನ್ ವಾಲ್, ಡ್ರೋಣ್, ಖರೀದಿಸಲು ಬ್ಯಾಂಕ್ ಗಳಲ್ಲಿ ಸಾಲ ಮಾಡಲಾಗಿದೆ. ಲಾಕ್ ಡೌನ್ ನಿಂದಾಗಿ ಸ್ಟುಡಿಯೋ ಬಾಗಿಲು ಹಾಕುವುದರ ಜೊತೆಗೆ ಶುಭ ಕಾರ್ಯಗಳಿಗೆ ಸಂಪೂರ್ಣ ಬ್ರೇಕ್ ಬಿದ್ದು ಬ್ಯಾಂಕ್ ನಲ್ಲಿ ಮಾಡಿರುವ ಸಾಲದ ಮೇಲಿನ ಬಡ್ಡಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೀಗೆ ಮುಂದುವರೆದರೆ ನಮ್ಮ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ .
ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಮಲ್ಲೇಶ್ ಮಾತನಾಡಿ ,ಎಲ್ಲರಿಗೂ ಸ್ಮೈಲ್ ಪ್ಲೀಸ್ ಎಂದು ಹೇಳುತ್ತಿದ್ದ ಫೋಟೋಗ್ರಾಫರ್ ಗಳ ಮುಖ ಬಾಡಿಹೋಗಿದೆ. ಮಳಿಗೆಗಳಿಗೆ ಬಾಡಿಗೆ , ವಿದ್ಯುತ್ ಬಿಲ್, ಕಾರ್ಮಿಕರಿಗೆ ವೇತನ ಕೊಡಲಾಗುತ್ತಿಲ್ಲ. ನಮ್ಮಗಳನ್ನೆ ನಂಬಿರುವ ನಮ್ಮ ಕುಟುಂಬ ನಿರ್ವಹಣೆ ಜೊತೆಗೆ ಮನೆಯ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ ಜೊತೆಗೆ ಕೈಸಾಲ, ಬ್ಯಾಂಕಿನ ಸಾಲ ಕಟ್ಟಲಾಗದೆ ಹೈರಾಣಾಗಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ಸ್ಟುಡಿಯೋದವರೆಗೆ ಯಾವುದೇ ಪ್ಯಾಕೇಜ್ ನೀಡದಿರುವುದು ನಮ್ಮ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಈಗಾಗಲೇ ರಾಜ್ಯ ಸಂಘದವರು ನಮ್ಮ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದಾರೆ ಎಂದರು .
Tags
ಬೇಲೂರು