ಬೇಲೂರು: ಕೊರೊನಾ ಭಯವಿಲ್ಲದಂತೆ ಜನರ ವರ್ತನೆ! ಅಧಿಕಾರಿಗಳ ಬಿಗಿ ಕ್ರಮ ಅನಿವಾರ್ಯವೇ?

 ಅನಂತರಾಜೇಅರಸು ಬೇಲೂರು:

ಇದೇನು ಲಾಕ್‍ಡೌನ್ ಅಂತ ತಿಳಿದುಕೊಂಡಿದ್ದಾರೊ ಅಥವಾ

ನೂಕುನುಗ್ಗಲಿನ ಸಂತೆ ಎಂದುಕೊಂಡಿದ್ದಾರೊ?.

ತಮ್ಮ ಜೀವದ ಮೇಲಿನ ಹಂಗು ತೊರೆದಿರುವ

ಇವರುಗಳಿಗೆ ಕನಿಷ್ಠ ತಮ್ಮ ಕುಟುಂಬದ ಸದಸ್ಯರ, ಮಕ್ಕಳ,

ಹೆತ್ತವರ, ವೃದ್ಧರ ಮೇಲಾದರೂ ಅಭಿಮಾನ ಬೇಡವೆ?.

ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದ್ದು, ಪೂರ್ಣ

ಪ್ರಮಾಣದಲ್ಲಿ ಟೆಸ್ಟ್ ಮಾಡಲಾಗುತ್ತಿಲ್ಲ ಎಂಬ ಆರೋಪದ

ನಡುವೆಯೂ ಪ್ರತಿನಿತ್ಯ ಸೋಂಕಿತ ಸಂಖ್ಯೆ

ಏರಿಕೆಯಾಗುತ್ತಿದೆ. 



ಈ ಸಂದರ್ಭದಲ್ಲಿ ಮೊದಲನೆ ಹಂತದ

ಕೊರೊನಾ ಸಂದರ್ಭದಲ್ಲಿ ಇದ್ದಷ್ಟು ಭಯ ಜನರಲ್ಲಿ

ಇಲ್ಲದಿರುವುದು ಕಂಡುಬರುತ್ತಿದೆ. `ಆ ಊರಲ್ಲಿ ಇಷ್ಟು ಜನ

ಸತ್ತರಂತೆ, ಆ ಹಳ್ಳಿ ಸೀಲ್‍ಡೌನ್ ಆಗಿದೆಯಂತೆ, ಹಳ್ಳಿಗೆಲ್ಲಾ

ಕೊರೊನಾ ಬಂದಿದೆಯಂತೆ' ಎಂದೆಲ್ಲಾ ಬೊಬ್ಬೆ ಹೊಡೆಯುವ,

ಚರ್ಚೆ ನಡೆಸುವ ನಮ್ಮ ಜನ ಸ್ವಪ್ರೇರಣೆಯಿಂದ

ಹೇಗಿರಬೇಕೆಂಬ ಸಾಮಾನ್ಯ ತಿಳುವಳಿಕೆಯೂ ಇಲ್ಲದಂತೆ

ವರ್ತಿಸುತ್ತಿದ್ದಾರೆ. ಯಾರ ಸಂಪರ್ಕವೂ ಇಲ್ಲದಿದ್ದರೂ

ಬಂದೆರಗುವ ಮಹಾಮಾರಿ ಗುಂಪುಗೂಡಿ ಓಡಾಡುವವರ ನಡುವೆ

ಬರದೆ ಇದ್ದೀತೆ? ಎಂಬ ಆಲೋಚನೆ ಬೇಡವೆ?.

ಮೊದಲ ಹಂತದ ಕೊರೊನಾ ವೇಳೆ ಇದ್ದಂತ ಬಿಗಿ

ಕ್ರಮ ಎರಡನೆ ಹಂತದ ಕೊರೊನಾ ವೇಳೆ ಇಲ್ಲವೇನೊ

ಎಂದೆನಿಸುತ್ತಿದೆ. ಜನರ ಬೇಕಾಬಿಟ್ಟಿ ವರ್ತನೆ ನಿಜಕ್ಕೂ ಬೇಸರ

ಸಂಗತಿ. ವಾರದ ಸಂತೆ ದಿನವಾದ ಸೋಮವಾರ ಸಂತೆ

ಇಲ್ಲದಿದ್ದರೂ ಸಂತೆಗೇನೂ ಕಡಿಮೆ ಇಲ್ಲದಂತೆ ಜನರ,

ವಾಹನಗಳ ಓಡಾಟವಿತ್ತು. ಒಂದು ಕಡೆ ವಾಹನ ಓಡಾಟ ಭರದಿಂದಲೇ

ಸಾಗಿದ್ದರೆ, ಅಂಗಡಿ ಮುಂಗಟ್ಟುಗಳ ಎದುರಿನಲ್ಲಿ ಸಾಮಾಜಿಕ ಅಂತರ

ಇಲ್ಲದೆ ಮನಬಂದಂತೆ ಗುಂಪುಗೂಡಿ, ಇನ್ನೇನು ವಸ್ತುಗಳು

ಸಿಗುವುದೆ ಇಲ್ಲವೇನೊ ಎಂಬಂತೆ ಖರೀದಿಸುತ್ತಿದ್ದದು

ಕಂಡುಬಂತು.

ದೇಗುಲ ರಸ್ತೆಯಲ್ಲಿರುವ ಎಸ್‍ಬಿಐ, ಡಿಸಿಸಿ ಬ್ಯಾಂಕ್ ಇಲ್ಲಂತೂ

ಗ್ರಾಹಕರ ಸಾಲು ಇತ್ತೇ ವಿನಃ ಸಾಮಾಜಿಕ ಅಂತ ಇರಲಿಲ್ಲ. ಎಸ್‍ಬಿಐ

ಮುಂದೆ ಈವರಗೆ ಸಾಮಾಜಿಕ ಅಂತರದ ವ್ಯವಸ್ಥೆ ಪರವಾಗಿಲ್ಲ

ಎಂದೆನಿಸಿದ್ದರೂ ಈ ದಿನ ಏಕಾಗಿ ನಿಯಮ ಉಲ್ಲಂಘನೆಯಾಯಿತು

ಎಂಬುದು ತಿಳಿದಿಲ್ಲ. ಬ್ಯಾಂಕಿನ ವ್ಯವಸ್ಥಾಪಕರು ಸಾಮಾಜಿಕ ಅಂತರ

ಕಾಪಾಡುವಂತೆ ಮನವಿ ಮಾಡುತ್ತಿದ್ದರು. ಆದರೂ ಗ್ರಾಹಕರು

ಕ್ಯಾರೆ ಎನ್ನಲಿಲ್ಲ.

ಸರ್ಕಾರಿ ಆಸ್ಪತ್ರೆ ಒಳಗೆ ಕೌಂಟರ್ ಸಮೀಪವೂ ಸಾಮಾಜಿಕ

ಅಂತರದ ಕೊರತೆಯಿತ್ತು. ಕೆಲವು ತಳ್ಳುಗಾಡಿಗಳ

ವರ್ತಕರು ಪೊಲೀಸ್ ಜೀಪ್ ಸೈರನ್ ಆದೊಡನೆ ಮಾಸ್ಕ್

ಧರಿಸುವುದು ನಂತರ ತೆಗೆದಿರಿಸುವುದನ್ನು ಮಾಡುತ್ತಿದ್ದರು.

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಎಲ್ಲವೂ ನಾಮಕಾವಸ್ತೆ

ಹಾಗೂ ದಂಡ ವಿಧಿಸುತ್ತಾರೆಂಬ ಭಯಕ್ಕಾಗಿ

ಅಳವಡಿಸಿಕೊಂಡಂತಿತ್ತು.

ಕೆಲವೊಂದು ಮೆಡಿಕಲ್ ಶಾಪ್‍ಗಳಲ್ಲಿ ಇದುವರಗೆ ಇದ್ದ

ಸಾಮಾಜಿಕ ಅಂತರ ಇಂದು ಕಂಡುಬರಲಿಲ್ಲ. ಪೊಲೀಸ್ ಜೀಪಿನ ಸೈರನ್

ಶಬ್ಧ ಆದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದ

ಗ್ರಾಹಕರು ಜೀಪು ಹೋದಮೇಲೆ ಎಂದಿನಂತೆ

ಗುಂಪುಗೂಡುವುದು ಮಾಮೂಲಾಗಿತ್ತು. ಪ್ರತಿನಿತ್ಯ ಬೆಳಿಗ್ಗೆ

6 ಗಂಟೆಯಿಂದ 10 ಗಂಟೆಯವರಗಿನ ಅವಧಿಯಲ್ಲಿ ದಿ

ನಬಳಕೆಯ ಎಲ್ಲಾ ವಸ್ತುಗಳು ಸುಲಲಿತವಾಗಿ, ಯಾವುದಕ್ಕೂ

ಕೊರತೆ ಇಲ್ಲದಂತೆ ದೊರಕುತ್ತಿವೆ. ತಳ್ಳುಗಾಡಿಗಳಲ್ಲಿ

ತರಕಾರಿ ಇನ್ನಿತರ ಕೆಲವೊಂದು ವಸ್ತುಗಳು ಮನೆ ಬಾಗಿಲಿಗೆ

ಬರುತ್ತಿವೆ. ಆದರೂ ಜನ ಏಕಾಗಿ ಮುಗಿಬೀಳುತ್ತಿದ್ದಾರೆ ಎಂಬುದೆ

ಅರ್ಥವಾಗುತ್ತಿಲ್ಲ. ಜೀವಭಯ ಇಲ್ಲದೆ ಮನಬಂದಂತೆ

ನಡೆದುಕೊಳ್ಳುವ ಈ ಜನರಿಗೆ ಪೊಲೀಸರ ಬಿಸಿ ಅನಿವಾರ್ಯ

ಎಂಬಂತಾಗಿದೆ. ನಾವು ಬದುಕಬೇಕು, ನಮ್ಮ ಕುಟುಂಬದವರು

ಸಾವಿನಿಂದ ಪಾರಾಗಬೇಕು, ಸಂಕಷ್ಟದಿಂದ ದೂರವಾಗಬೇಕೆಂಬ

ಸ್ವಯಂ ಬದ್ಧತೆ ಇಲ್ಲದಿರುವ ಈ ಜನಕ್ಕೆ ಪೊಲೀಸರ ಬಿಗಿ ಕ್ರಮ

ಅನಿವಾರ್ಯ ಎಂಬಂತಾಗಿದೆ.

ಪೊಲೀಸರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ

ಸೌಜನ್ಯ, ಔದಾರ್ಯ ಎಲ್ಲವೂ ದೌರ್ಬಲ್ಯ ಎನ್ನುವಂತಾಗಬಾರದು.

ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. ನಿಯಮ ಜಾರಿಗೆ

ಕಟ್ಟುನಿಟ್ಟಿನ ಕ್ರಮವೊಂದೇ ಎಲ್ಲಕ್ಕೂ ಪರಿಹಾರವಲ್ಲ ಎಂಬ

ಅಧಿಕಾರಿಗಳ ಸಹಜ ಮನಸ್ಥಿತಿಯನ್ನು ಪರೀಕ್ಷೆ ಮಾಡುವುದು

ಒಳ್ಳೆಯದಲ್ಲ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಇದನ್ನು

ಅರ್ಥಮಾಡಿಕೊಳ್ಳಬೇಕಾದ್ದು ಎಲ್ಲರ ಜವಾಬ್ದಾರಿ ಕೂಡ. ಇದು

ನಮಗಾಗಿ, ಎಲ್ಲರಿಗಾಗಿ.

Post a Comment

Previous Post Next Post