ಬೇಲೂರು: ಈವರೆಗೆ ಅಲ್ಪಸ್ವಲ್ಪ ಮೃಧು ಧೋರಣೆ ಅನುಸರಿಸಿದ್ದ ಇಲ್ಲಿನ ಪೊಲೀಸ್ ಅಧಿಕಾರಿಗಳು ಇದೀಗ ದಿಢೀರ್ ಆಗಿ ಮನಬಂದಂತೆ ವಾಹನವೇರಿ ಬರುವವರ ಮೇಲೆ ಕ್ರಮ ಕೈಗೊಳ್ಳಲು ದೃಢ ನಿರ್ಧಾರಕ್ಕೆ ಬಂದಿದ್ದಾರೆ.
ಈ ಸಂಬಂಧ ಸಿಪಿಐ ಶ್ರೀಕಾಂತ್, ಆರೋಗ್ಯಾಧಿಕಾರಿ ಡಾ.ವಿಜಯ್, ಡಾ. ನರಸೇಗೌಡ, ಪಿಎಸ್‍ಐ ಎಸ್.ಜಿ.ಪಾಟೀಲ್ ಇವರನ್ನು ಒಳಗೊಂಡ ತುರ್ತು ಸಭೆಯೊಂದನ್ನು ನಡೆಸಿ ಕೆಲವೊಂದು ವಾಹನ ಸಂಚಾರ ನಿರ್ಬಂಧಕ್ಕೆ ತೀರ್ಮಾನ ಕೈಗೊಂಡಿದ್ದಾರೆ. ಅದು ಇದುನೆಪಹೇಳಿ ಪಟ್ಟಣದೊಳಕ್ಕೆ ಪ್ರವೇಶ ಪಡೆಯುತ್ತಿದ್ದ ದ್ವಿಚಕ್ರ ವಾಹನಗಳನ್ನು ಪಟ್ಟಣದ ಗಡಿಭಾಗದಲ್ಲೆ ತಡೆಯಲು ನಿರ್ಧರಿಸಿದ್ದಾರೆ.
ಅದರಂತೆ ವಿಷ್ಣುಸಮುದ್ರಕೆರೆ, ಎನ್. ನಿಡಗೋಡು, ಹನುಮಂತನಗರದ ಗಡಿ, ಬಂಟೇನಹಳ್ಳಿ (ಬಸ್
ಡಿಪೋ), ಚಿಕ್ಕಬ್ಯಾಡಿಗೆರೆ ಕೆರೆ ತಿರುವು, ಹೊಸನಗರ ತಿರುವು ಈ ಸ್ಥಳದಲ್ಲಿ ಪೊಲೀಸರ ಸರ್ಪಗಾವಲು ಹಾಕಲಿದ್ದಾರೆ. ಇದುವರಗೆ ಪಟ್ಟಣದೊಳಗೆ ಅಲ್ಲಲ್ಲಿ ವಾಹನ ತಡೆದು ವಿಚಾರಿಸಿ ಒಳ ಬಿಡುತ್ತಿದ್ದ ಪೊಲೀಸರು ಇದೀಗ ಮುಲಾಜಿಲ್ಲದೆ ವಾಪಸ್ ಕಳುಹಿಸಲಿದ್ದಾರೆ. ಪೊಲೀಸರ ಕಣ್ಣು ತಪ್ಪಿಸಿ ಒಳ ಪ್ರವೇಶಿಸಿದರೆ ಅಂತಹವರಿಗೆ 5 ಸಾವಿರ ರೂ. ದಂಡ ವಿಧಿಸುವುದಲ್ಲದೆ ವಾಹನ ವಶಪಡಿಸಿಕೊಳ್ಳಲು ಯೋಚಿಸಿದ್ದಾರೆ.
ತುರ್ತು ಹಾಗೂ ನಿಯಮದೊಳಗಿನ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಂತೆ ದಿನವಾದ ಸೋಮವಾರದ ಕಾರ್ಯಾಚರಣೆ ಹೇಗಿರುತ್ತದೆ ಎನ್ನುವ ಕುರಿತು ಭಾನುವಾರವೇ ಕಾರ್ಯಾಚರಣೆ ನಡೆಸಿ ಎಚ್ಚರಿಸಿದ್ದಾರೆ. ವಸ್ತುಗಳ ಖರೀದಿಗೆ ಬರುವವರು ಕಾಲ್ನೆಡಿಗೆಯಲ್ಲಿ ಆಗಮಿಸಿ ಬೆಳಿಗ್ಗೆ 10 ಗಂಟೆಯೊಳಗೆ ವಸ್ತುಗಳ ಖರೀದಿಸಿ
ತೆರಳಬೇಕಿದೆ. ಆನಂತರ ಸುಕಾಸುಮ್ಮನೆ ನಡೆದು
ಬರುವವರ ಮೇಲೂ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಕೊರೊನಾ ಸೋಂಕು ಪ್ರಕರಣದಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲಿ 4 ಸ್ಥಾನದೊಳಗೆ ಇದ್ದು ಆತಂಕದ ಮನೆ ಮಾಡಿದ್ದರೆ, ಹಾಸನ ಜಿಲ್ಲೆಯಲ್ಲಿ ಬೇಲೂರು ತಾಲ್ಲೂಕು ಎರಡನೇ ಸ್ಥಾನದಲ್ಲಿರುವುದು ಬೇಸರದ ಸಂಗತಿಯೆ. ಈ ಹಿನ್ನಲೆಯಲ್ಲಿ
ಪೊಲೀಸರ ಈ ಕ್ರಮ ಅನಿವಾರ್ಯ ಹಾಗೂ ಅಭಿನಂದನಾರ್ಹ.