ಲಸಿಕೆ ತೆಗೆದುಕೊಳ್ಳದವರಿಗೆ ಮದ್ಯ ಸಿಗಲ್ಲ – ಎಣ್ಣೆ ಪ್ರಿಯರಿಗೆ ಶಾಕ್

 ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಲು ಉತ್ತರ ಪ್ರದೇಶದ ಬಾರ್ ಮಾಲೀಕರು ಮುಂದಾಗಿದ್ದಾರೆ.

ಲಸಿಕೆ ಪಡೆಯುವಂತೆ ಜನರನ್ನು ಪ್ರೇರೇಪಿಸಲು ಸರ್ಕಾರ ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಇಟಾವಾ ಜಿಲ್ಲಾಡಳಿತ ಒಂದು ಹೆಜ್ಜೆ ಮುಂದೆ ಹೋಗಿ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಬೇಕೆಂದು ಎಲ್ಲ ಮದ್ಯದಂಗಡಿಗಳಿಗೆ ಆದೇಶ ಹೊರಡಿಸಿದೆ.



ಈ ಆದೇಶವನ್ನು ಬಾರ್ ಮಾಲೀಕರು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಬಾರ್ ಮುಂಭಾಗ ಗೋಡೆಗಳ ಮೇಲೆ “ಲಸಿಕೆ ಪಡೆದವರು ಮಾತ್ರ ಮದ್ಯ ಖರೀದಿಗೆ ಅರ್ಹರು” ಎಂದು ನೋಟಿಸ್ ಅಂಟಿಸಿದ್ದಾರೆ. ಈ ಆದೇಶದ ಅನ್ವಯ ಗ್ರಾಹಕರು ಆರಂಭದಲ್ಲಿ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ತೋರಿಸಿದ ಬಳಿಕ ಅವರಿಗೆ ಮದ್ಯವನ್ನು ನೀಡಲಾಗುತ್ತದೆ.

ಸರ್ಕಾರ ಈ ಆದೇಶ ಹೊರಡಿಸಿಲ್ಲ ಎಂದು ಅಬಕಾರಿ ಇಲಾಖೆ ಹೇಳಿದೆ. ಲಸಿಕೆ ಗುರಿಯನ್ನು ಮುಟ್ಟಲು ಈ ಆದೇಶವನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಡಳಿತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಲಸಿಕೆ ವಿತರಣೆ ಆರಂಭಿಸಿ ಸುಮಾರು ಆರು ತಿಂಗಳಾಗುತ್ತಾ ಬಂದಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ವಿತರಣೆ ಸಾಧ್ಯವಾಗಿಲ್ಲ. ಒಂದೆಡೆ ಲಸಿಕೆ ಕೊರತೆ ಕಾರಣವಾಗಿದ್ದರೆ ಇನ್ನೊಂದೆಡೆ ಜನರು ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಿಲ್ಲ.

ಕೇಂದ್ರ ಆರೋಗ್ಯ ಇಲಾಖೆ ಭಾನುವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಲಸಿಕೆ ವಿತರಣೆಯಲ್ಲಿ ಕೇರಳ, ಆಂಧ್ರ, ತಮಿಳುನಾಡಿಗಿಂತ ಕರ್ನಾಟಕ ಮುಂದಿದೆ. ರಾಷ್ಟ್ರಮಟ್ಟದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ, ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದ್ದರೆ ಕರ್ನಾಟಕ 6ನೇ ಸ್ಥಾನದಲ್ಲಿದೆ.

Post a Comment

Previous Post Next Post