ಹಿಡಿದ ಕೆಲಸವನ್ನು ಹಠ ಹಿಡಿದು ಛಲದಿಂದ ಮಾಡುವ : ಕೆ.ಎಂ.ಶಿವಲಿಂಗೇಗೌಡ್ರು.

- ಜಾವಗಲ್ ಪ್ರಸನ್ನ
ಒಂದು ಕ್ಷೇತ್ರದ ನಾಯಕನೆಂದರೆ ಕೇವಲ ಕ್ಷೇತ್ರಕ್ಕೆ ರಸ್ತೆ, ನಲ್ಲಿ ಹಾಕಿಸುವುದಷ್ಡೇ ಅಲ್ಲ ತಳವರ್ಗದ ಸಮುದಾಯದಿಂದ ಹಿಡಿದು ಮೇಲ್ವರ್ಗದ ಸಮುದಾಯದ ಎಲ್ಲರು ಗೌರವಿಸುವ, ವಿರೋದ ಪಕ್ಷದ ಕಾರ್ಯಕರ್ತರು ಸಹ ಇವರು ಮಾಡುವ ಕೆಲಸಗಳನ್ನು ಒಪ್ಪುವವನೇ ನಿಜವಾದ ನಾಯಕ. ಕ್ಷೇತ್ರದಲ್ಲಿ ಒಂದಲ್ಲ ಎರಡಲ್ಲ, ಸಾವಿರಾರು ಪ್ರಮುಖ ಕೆಲಸಗಳನ್ನು ಮಾಡುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ತನ್ನನ್ನು ತಾನು ತೊಡಗಿಸಿಕೊಂಡು ಜನಸಾಮಾನ್ಯರ ಪಾಲಿನ ಆಶಾಕಿರಣ ಆಗಿರುವವರೇ ಅರಸೀಕೆರೆ ಕ್ಷೇತ್ರದ ಶಾಸಕರಾದ ಶ್ರೀ ಕೆ.ಎಂ.ಶಿವಲಿಂಗೇಗೌಡ್ರು.

ಗೌಡ್ರು ಅಂದರೆ ಆಗೇನೆ, ಹಿಡಿದ ಕೆಲಸವನ್ನು ಹಠ ಹಿಡಿದು ಛಲದಿಂದ ಮಾಡುವವರು. ಅದೆಂತಹ ಕೆಲಸವೇ ಇರಲಿ, ಆ ಕೆಲಸಕ್ಕೆ ಹಗಲು ರಾತ್ರಿಯೆನ್ನದೇ ಸರ್ಕಾರದ ಅಧಿಕಾರಿಗಳಿರಬಹುದು, ಯಾವುದೇ ಪಕ್ಷದ ಮಂತ್ರಿಗಳಿರಬಹುದು, ಮುಖ್ಯಮಂತ್ರಿಗಳಿರಬಹುದು, ಯಾರನ್ನೇ ಆಗಲಿ ಅವರನ್ನು ಖುದ್ದು ಭೇಟಿ ಮಾಡಿ ಕ್ಷೇತ್ರದ ಕೆಲಸವನ್ನು ಮಾಡಿಸಿಕೊಂಡು ಬರುವ ಛಲಗಾರರು, ಛಲದಂಕಮಲ್ಲರು. ಯಾವುದೇ ಪಕ್ಷದ ಸರ್ಕಾರವಿದ್ದರು ಸಹ ಆ ಸರ್ಕಾರದ ಮಂತ್ರಿಗಳು, ಮುಖ್ಯಮಂತ್ರಿಗಳೊಂದಿಗೆ ತಮ್ಮ ಉತ್ತಮ ಬಾಂಧವ್ಯವನ್ನು ಬೆಳೆಸುವ ಮೂಲಕ ಕ್ಷೇತ್ರಕ್ಕೆ ಅಗತ್ಯವಾದ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳುವಲ್ಲಿ ನಿಸ್ಸೀಮರು. ನಾಡಿನ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಹೆಚ್.ಡಿ.ಕುಮಾರಸ್ವಾಮಿ, ಧರ್ಮಸಿಂಗ್, ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ್ರು, ಜಗದೀಶಶೆಟ್ಟರ್ ಅವರಂತ ಎಲ್ಲರೊಂದಿಗೂ ಅಪರೂಪದ ಬಾಂಧವ್ಯವನ್ನು ಬೆಳಸಿಕೊಂಡು ಬಂದವರು.
ಅನೇಕ ಜನಪ್ರತಿನಿಧಿಗಳು ಬೆಂಗಳೂರಿಗೆ ತೆರಳಿದರೆ ಕೇವಲ ವಿಧಾನಸೌಧ ಹಾಗೂ ಎಂ.ಎಸ್.ಬಿಲ್ಡಿಂಗಿನಲ್ಲಿರುವ ಕಛೇರಿ, ಅಲ್ಲಿರುವ ಅಧಿಕಾರಿಗಳೆ ಎಲ್ಲ ಎಂದು ತಿಳಿದು ಕೊಂಡಿದ್ದರೆ, ಗೌಡ್ರು ಬೆಂಗಳೂರಿನ ಸಂಪಂಗಿರಾಮನಗರದ ಸಫಾಯಿ ಕರ್ಮಚಾರಿಗಳ ಆಯೋಗವಿರಬಹದು, ಇತರೆ ಯಾವುದೋ ಒಂದು ಪ್ರದೇಶದ ಗಲ್ಲಿಯಲ್ಲಿರುವ ಸಣ್ಣ ಸಣ್ಣ ಇಲಾಖೆಗಳನ್ನು ಬಿಡದೇ ಆಯಾ ಇಲಾಖೆಗಳಿಂದ ಸಿಗುವ ಅನುದಾನ, ಆಯಾ ಇಲಾಖೆಗಳಿಂದ ಕ್ಷೇತ್ರದ ಜನರಿಗೆ ಆಗುವ ಕೆಲಸಗಳನ್ನು ಮಾಡಿಸಿಕೊಂಡು ಬರುವಲ್ಲಿ ಸದಾ ಸಿದ್ದಹಸ್ತರು.
ಸತತ ಮೂರು ಬಾರಿ ಗೆದ್ದು ನಾಲ್ಕನೇ ಬಾರಿಗೆ ಗಂಡಸಿ ಕ್ಷೇತ್ರದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಪ್ರಬಲ ರಾಜಕಾರಣಿಯಾಗಿ ಬೆಳೆದಿದ್ದ ಬಿ.ಶಿವರಾಂರವರ ವಿರುದ್ದ 2004 ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಮಾನ್ಯ ಹೆಚ್.ಡಿ.ದೇವೇಗೌಡ್ರು ಹಾಗೂ ನಾಯಕರಾದ ಹೆಚ್.ಡಿ.ರೇವಣ್ಣ ಅವರ ಆಶೀರ್ವಾದದೊಂದಿಗೆ ಸ್ಪರ್ಧಿಸುವ ಮೂಲಕ ಬಿ.ಶಿವರಾಂ ಅವರ 40000 ಮತಗಳ ಅಂತರವನ್ನು ಕೇವಲ 18 ಮತಗಳಿಗೆ ತಂದು ನಿಲ್ಲಿಸಿ, ಗೆಲುವಿನ ಸನಿಹಕ್ಕೆ ಬಂದು ನಿಂತು ಈ ಜಿಲ್ಲೆಯ ಪ್ರಬಲ ರಾಜಕಾರಣಿಯಾಗಿ ಬೆಳೆಯುತ್ತೇನೆ ಎಂದು ತೋರಿಸಿಕೊಟ್ಟವರು. 

ಒಮ್ಮೆ ಗೆದ್ದವರು ಮತ್ತೊಮ್ಮೆ ಗೆಲ್ಲುವುದೇ ಇಲ್ಲವೆಂಬ ಇತಿಹಾಸವಿದ್ದ ಅರಸೀಕೆರೆ ಕ್ಷೇತ್ರದ 2009 ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಮೂಲಕ ವಿಧಾನಸೌಧಕ್ಕೆ ಪ್ರವೇಶ ಮಾಡಿದ ಇವರು ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದು ಗೌಡರ ಸಾಧನೆಯೇ ಸರಿ. ಸುಲಭವಾಗಿ ಯಾರನ್ನು ಒಪ್ಪದ ಅರಸೀಕೆರೆ ಕ್ಷೇತ್ರದ ಪ್ರಬುದ್ದ ಮತದಾರರು ಮೂರು ಬಾರಿ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆಂದರೆ ಕ್ಷೇತ್ರದಲ್ಲಿ ಇವರು ನಿರಂತರವಾಗಿ ಮಾಡಿದ ಜನಪರ ಕೆಲಸಗಳಿಂದ ಮಾತ್ರ ಎಂಬುದನ್ನು ಪ್ರತಿಯೊಬ್ಬರು ಕೂಡಾ ಒಪ್ಪುತ್ತಾರೆ.

 ಬರದ ನಾಡಿನ ಭಗೀರಥ:
ಅರಸೀಕೆರೆ ನಗರದ ನಗರಸಭಾ ವ್ಯಾಪ್ತಿಯ 31 ವಾರ್ಡಗಳು ಸೇರಿದಂತೆ  ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 537 ಹಳ್ಳಿಗಳಲ್ಲಿಯೂ ಕುಡಿಯುವ ನೀರಿಗಾಗಿ ಪರಿತಪಿಸುತ್ತಾ ಪ್ಲೋರೈಡ್ ನೀರನ್ನು ಕುಡಿಯುತ್ತಾ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದ ಸಂದರ್ಭದಲ್ಲಿ ಕ್ಷೇತ್ರದ ಜನತೆಯ ಆರೋಗ್ಯಕ್ಕಿಂತ ಮುಖ್ಯವಾದುದು ಬೇರೆ ಯಾವುದು ಇಲ್ಲ ಎಂದು ಮನಗಂಡು ಶುದ್ದ ಕುಡಿಯುವ ನೀರನ್ನು ಕುಡಿಯಲು ಕೊಡಬೇಕೆಂದು ಹಠ ತೊಟ್ಟು ಹೇಮಾವತಿ ನದಿ ನೀರಿನ ಯೋಜನೆಯನ್ನು ಹಿಡಿದುಕೊಂಡು ಸರ್ಕಾರದ ಮಟ್ಟದಲ್ಲಿ  ಬಹುದೊಡ್ಡ ಹೋರಾಟ ಮಾಡಿದ ಫಲವೇ ಇಂದು ಅರಸೀಕೆರೆ ನಗರದ ಹಾಗೂ ಕ್ಷೇತ್ರದ ಪ್ರತಿ ಹಳ್ಳಿಯ ಪ್ರತಿ ಮನೆಯಲ್ಲಿಯೂ ಜನರು ಶುದ್ದ ಕುಡಿಯುವ ನೀರನ್ನು ಕುಡಿಯುವಂತಾಗಿ ಆರೋಗ್ಯದಿಂದ ಇದ್ದಾರೆ ಎಂದು ಕ್ಷೇತ್ರದ ನೂರಾರು ಮಹಿಳೆಯರು ಇವರನ್ನು ಹರಸುವ ಜೊತೆಗೆ ನಮ್ಮೂರಿನ ಭಗೀರಥ ನಮ್ಮ ಶಾಸಕರು ಎನ್ನುತ್ತಾರೆ. 
ಸ್ಪಪಕ್ಷದ ನಾಯಕರುಗಳೇ ವಿರೋಧಿಸಿದ ಎತ್ತಿನಹೊಳೆ ಯೋಜನೆಯಲ್ಲಿ ಅರಸೀಕೆರೆ ತಾಲ್ಲೂಕು ಕೂಡಾ ಸೇರಬೇಕೆಂದು ಹಠ ಹಿಡಿದು ಅನುಷ್ಠಾನಗೊಳಿಸಬೇಕೆಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ಡಿ.ವಿ.ಸದಾನಂದಗೌಡರ ಬೆನ್ನು ಬಿದ್ದು ಎತ್ತಿನಹೊಳೆ ಯೋಜನೆಗೆ ಸೇರಿಸುವ ಮೂಲಕ, ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ ಶಂಕುಸ್ಥಾಪನೆ ಸಮಾರಂಭದಲ್ಲಿ  ತಮ್ಮ ಪಕ್ಷದ ಯಾವೊಬ್ಬ ನಾಯಕರು, ಶಾಸಕರು ಭಾಗವಹಿಸದ ಈ ಸಮಾರಂಭದಲ್ಲಿ ಭಾಗವಹಿಸಿ ಎತ್ತಿನಹೊಳೆ ಯೋಜನೆಗೆ ಸಂಪೂರ್ಣ ಬೆಂಬಲವನ್ನು ನೀಡುವ ಮೂಲಕ ಈ ಯೋಜನೆಯಿಂದ ಕ್ಷೇತ್ರದ ಕೆರೆಗಳು ತುಂಬುವ ಮೂಲಕ  ರೈತರ ಬದುಕು ಹಸನಾದರೆ ಸಾಕು, ರೈತರ ಹಿತಕ್ಕಿಂತ ನನ್ನ ಶಾಸಕ ಹುದ್ದೆ ಮುಖ್ಯವಲ್ಲ ಎಂದು ತೋರಿಸಿಕೊಟ್ಟವರು.

 ಶೈಕ್ಷಣಿಕ ಕ್ಷೇತ್ರ: 
ಅರಸೀಕೆರೆ ಕ್ಷೇತ್ರ ಯಾವುದೇ ಕಾರಣಕ್ಕೂ ಶಿಕ್ಷಣ ಕ್ಷೇತ್ರದಲ್ಲಿ ಹಿಂದೆ ಉಳಿಯಬಾರದೆಂಬ ಮಹತ್ವಾಕಾಂಕ್ಷೆ ಗೌಡರದು. 
ಬಾಣಾವರ, ಗಂಡಸಿ, ಅರಸೀಕೆರೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿಸಿಕೊಡುವ ಮೂಲಕ ವಿದ್ಯಾರ್ಥಿಗಳು ಉತ್ತಮ ವಾತಾವರಣದಲ್ಲಿ ಕಲಿಯಲಿ ಎಂಬ ಆಶಯದ ಜೊತೆಗೆ ಬಾಣಾವರ, ಕಣಕಟ್ಟೆ, ಕುರುವಂಕ, ಬಾಗೇಶಪುರ, ಅರಸೀಕೆರೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಸಿರುತ್ತಾರೆ. ಹಾಗೂ ಬಾಗೇಶಪುರ, ದೊಡ್ಡೇನಳ್ಳಿ, ಜೆ.ಸಿ.ಪುರ, ಬಾಣಾವರ, ಹಬ್ಬನಘಟ್ಟ ಕಾವಲಿನಲ್ಲಿ ಮುರಾರ್ಜಿ ವಸತಿ ಶಾಲೆ, ಕಿತ್ತೂರು ಚನ್ನಮ್ಮ ವಸತಿ ಶಾಲೆ, ಅಲ್ಪಸಂಖ್ಯಾತ ವಸತಿ ಶಾಲೆಯಂತ  ಒಟ್ಟು 06 ಸುಸಜ್ಜಿತ ಕಟ್ಟಡಗಳನ್ನೊಳಗೊಂಡ ಶಾಲೆಗಳನ್ನು ಕ್ಷೇತ್ರಕ್ಕೆ ತರುವ ಮೂಲಕ ತಾಲ್ಲೂಕಿನ ಬಡ ಮಕ್ಕಳಿಗೂ ಸಹ ಉತ್ತಮ ಶಿಕ್ಷಣವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಜೊತೆಗೆ ಸ್ವತಃ ಚಗಚಗೆರೆ, ಚಿಂದೇನಹಳ್ಳಿ, ಬಾಣಾವರ ಶಾಲೆಗಳನ್ನು ಸಂಪೂರ್ಣವಾಗಿ ದತ್ತು ಪಡೆದು ಆ ಶಾಲೆಗಳ ಅಭಿವೃದ್ದಿಗಾಗಿ  ಶ್ರಮಿಸುತ್ತಿರುವುದರ ಜೊತೆಗೆ ಉನ್ನತ ಶಿಕ್ಷಣಕ್ಕೂ ಕೂಡಾ ಮಹತ್ವವನ್ನು ನೀಡಿದ ಗೌಡರು ಕ್ಷೇತ್ರಕ್ಕೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ, ಕ್ಷೇತ್ರದ ಬಂಡಿಹಳ್ಳಿಯಲ್ಲಿ ಕಾಲೇಜು ಕಾಮಗಾರಿ ಪ್ರಗತಿಯಲ್ಲಿರುವುದು ಶೈಕ್ಷಣಿಕ ಕ್ಷೇತ್ರದ ಬಗ್ಗೆ ಇವರಿಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ.

 ಹೈನುಗಾರಿಕೆ:
ಪ್ರತಿ ಗ್ರಾಮದ ಜನರು ಸ್ವಾವಲಂಬಿಗಳಾಗಿ ಬದುಕಬೇಕೆಂಬ ಸದಾಶಯದೊಂದಿಗೆ ಹಾಗೂ ಹೈನುಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ಕ್ಷೇತ್ರದ ಪ್ರತಿ ಹಳ್ಳಿಗಳಿಗಲ್ಲೂ ಹಾಲು ಉತ್ಪಾದನಾ ಸಹಕಾರ ಸಂಘವನ್ನು ಪ್ರಾರಂಭಿಸುವ ಮೂಲಕ ತನ್ನೂರಿನಲ್ಲೇ ಇರುವ ಹಾಲು ಉತ್ಪಾದನಾ ಸಂಘಕ್ಕೆ ಹಾಲನ್ನು ಹಾಕಿ ಜೀವನ ಮಾಡಬಹುದು ಎಂಬ ಆಶಾಭಾವ ಜನರಲ್ಲಿ ಮೂಡುವಂತೆ ಮಾಡಿ ಹಸುಗಳನ್ನು ಸಾಕುವ ಮೂಲಕ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಪ್ರೇರೇಪಣೆ ನೀಡಿದವರು ಇದೇ ಗೌಡರು ಎನ್ನುತ್ತಾರೆ ಸ್ವತಃ ಹೈನುಗಾರಿಕೆಯಿಂದ ಬದುಕನ್ನು ಕಂಡುಕೊಂಡ ರೈತ ವರ್ಗದವರು.
ಇದರ ಜೊತೆಯಲ್ಲಿಯೇ ರೈತರು ಕರೆದ ಹಾಲನ್ನು ಸಂಗ್ರಹಿಸಿಕೊಂಡು ಹೋಗುವ ಹಾಲಿನ ವಾಹನಗಳು ತಡವೇಳೆಗೆ ಹಾಸನದ ಹಾಲಿನ ಡೈರಿಗೆ ಹೋಗುವ ಅನೇಕ ಸಂದರ್ಭದಲ್ಲಿ ಹಾಲು ಹಾಳಾಗಿ ರೈತರು ಹಾಕಿದ ಹಾಲಿನ ಹಣವು ಬರದೇ ರೈತರಿಗೆ ತೊಂದರೆಯಾಗುತ್ತಿದ್ದನ್ನು ಮನಗಂಡು ಕ್ಷೇತ್ರದಲ್ಲಯೇ ಹಾಲು ಶಿಥಲೀಕರಣ ಕೇಂದ್ರವನ್ನು ಮಾಡಿಸಿದರೆ ರೈತರಿಗೆ ಸಹಾಯವಾಗುದೆಂದು ಅರಿತು ಗೀಜೀಹಳ್ಳಿಯ 06 ಎಕರೆ ಪ್ರದೇಶದಲ್ಲಿ ಹಾಲು ಶಿಥಲೀಕರಣ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ರೈತರ ಪಾಲಿನ ಸಂಜೀವಿನಿಯಾಗಿದ್ದಾರೆ. ಜೊತೆಗೆ ಇದೇ ಹಾಲು ಶಿಥಲೀಕರಣ ಕೇಂದ್ರದಲ್ಲಿ ಸ್ಥಳೀಯ ನೂರಾರು ಜನರು ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಾ ತಮ್ಮ ಬದುಕನ್ನು ಕಂಡುಕೊಂಡಿದ್ದಾರೆ.

 ವಸತಿ:

ಪ್ರತಿ ವರ್ಷ ವಸತಿ ರಹಿತರಿಗೆ ಕ್ಷೇತ್ರದ್ಯಾಂತ ನೀಡಲಾಗುವ ಸಾವಿರಾರು ವಸತಿಗಳ ಜೊತೆಗೆ ಶಿವಲಿಂಗೇಗೌಡರ ಶ್ರಮ ಮತ್ತು ಇಚ್ಛಾಶಕ್ತಿಯ ಮೇರೆಗೆ ಅರಸೀಕೆರೆ ನಗರದ 1200 ವಸತಿ ರಹಿತರಿಗೆ ಪ್ರಧಾನಮಂತ್ರಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಮನೆಯನ್ನು ನಿರ್ಮಿಸಿ ಕೊಡುತ್ತಿರುವುದು ಹಾಗೂ ನಗರದ ಇಂದಿರಾನಗರ, ಸರಸ್ವತಿಪುರಂನಲ್ಲಿ ವಾಸಿಸುತ್ತಿರುವ ಹಕ್ಕುಪತ್ರ ಹೊಂದಿರುವ ನೂರಾರು ವಸತಿ ರಹಿತರಿಗೆ ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ಮನೆಗಳನ್ನು ನಿರ್ಮಿಸಿ ಕೊಟ್ಟು ಗುಡಿಸಲು ಮುಕ್ತ ನಗರವನ್ನಾಗಿ ಮಾಡಿರುವುದು ದೀನ ದಲಿತರ, ಬಡ ಜನತೆಯ ಬಗ್ಗೆ ಇವರಿಗೆ ಇರುವ ಅಪಾರ ಕಾಳಜಿಯನ್ನು ಮತ್ತು ಮಾನವೀಯ ಮೌಲ್ಯವನ್ನು ಎತ್ತಿ ತೋರಿಸುತ್ತದೆ.  

 ಗ್ರಾಮೀಣ ಪ್ರದೇಶದ ಅಭಿವೃದ್ದಿ:

ಹಳ್ಳಿಗಳ ಅಭಿವೃದ್ದಿಯೇ ದೇಶದ ಅಭಿವೃದ್ದಿ ಎಂಬ ಮಹಾತ್ಮ ಗಾಂಧೀಜಿಯವರ ಮಾತಿನಂತೆ ಹಳ್ಳಿಗಳ ಅಭಿವೃದ್ದಿಗೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಓಡಾಡಲು ಕೂಡಾ ಸಾಧ್ಯವಾಗದಿದ್ದ ಕ್ಷೇತ್ರದ ನೂರಾರು ಹಳ್ಳಿಗಳಿಗೆ ಹಾಗೂ ಪ್ರಮುಖ ನಗರಗಳಿಗೆ ಹೊಂದಿಕೊಳ್ಳುವ ಎಲ್ಲ ಗ್ರಾಮಗಳಿಗೂ ಸಿಮೆಂಟ್ ರಸ್ತೆ ಹಾಗೂ ಡಾಂಬರೀಕರಣ ರಸ್ತೆ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಸಾರಿಗೆ ಕಾರ್ಯಾಚರಣೆಗೂ ಸಹ ಅನುಕೂಲ ಮಾಡಿಕೊಟ್ಟಿರುತ್ತಾರೆ.

ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಸಮುದಾಯ ಭವನ ನಿರ್ಮಾಣ ಮಾಡುವ ಮೂಲಕ ಹಳ್ಳಿಯ ಜನತೆ ಒಟ್ಟಾಗಿ ಸೇರಿ ಸೌಹಾರ್ದಯುತವಾಗಿ ಹಬ್ಬ ಹರಿದಿನಗಳಲ್ಲಿ ಭಾಗಿಯಾಗಿ ಶುಭ ಕಾರ್ಯಗಳನ್ನು ಮಾಡಲು ಪ್ರೋತ್ಸಾಹ ನೀಡಿದ ಕೀರ್ತಿ ಕೂಡಾ ಮಾನ್ಯ ಶಾಸಕರದ್ದೆ.

ಗ್ರಾಮೀಣ ಪ್ರದೇಶದ ಜನತೆಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಉಪಯೋಗವಾಗುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಕಡೆ ಬಸ್ ತಂಗುದಾಣಗಳ ಜೊತೆಗೆ ತಾಲ್ಲೂಕಿನ ಕಟ್ಟಕಡೆಯ ಗ್ರಾಮವಾದ ಕಣಕಟ್ಟೆ, ಜೆ.ಸಿ.ಪುರ ಗ್ರಾಮಗಳಲ್ಲಿ ಕೋಟ್ಯಾಂತರ ರೂಪಾಯಿಗಳ ಯೋಜನೆಯ ಸುಸಜ್ಜಿತವಾದ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲು ಪ್ರಾರಂಭಿಸಿರುವುದು ಗ್ರಾಮೀಣ ಭಾಗದ ಜನರ ಬಗ್ಗೆ ಇರುವ ಇವರ ಕಾಳಜಿ ಎಷ್ಟು ಎಂಬುದನ್ನು ತೋರಿಸುತ್ತದೆ.

ತರಕಾರಿ, ಹಣ್ಣು ಬೆಳೆದ ರೈತರಿಗೆ ಪೂರಕವಾದ ಬೆಲೆ ಸಿಗದೇ ಇದ್ದಾಗ ಬೀದಿಯಲ್ಲಿ ಹಣ್ಣು ತರಕಾರಿಗಳನ್ನು ಎಸೆಯಬಾರದೆಂದು ಗೀಜೀಹಳ್ಳಿಯಲ್ಲಿ ಹಣ್ಣು ಮತ್ತು ತರಕಾರಿ ಶಿಥಲೀಕರಣ ಕೇಂದ್ರವನ್ನು ಪ್ರಾರಂಭ ಮಾಡಿದ್ದು, ಪೂರಕ ಬೆಲೆ ಸಿಗುವವರೆಗೂ ಶಿಥಲೀಕರಣ ಕೇಂದ್ರದಲ್ಲಿ ಇಟ್ಟು ನಂತರ ಮಾರಾಟ ಮಾಡಲು ಅನುಕೂಲವಾಗುವಂತೆ ರೈತರ ಪರವಾದ ನಿಜವಾದ ಕಾಳಜಿ ಕ್ಷೇತ್ರದ ಶಾಸಕರದ್ದು.

ಕ್ಷೇತ್ರದ ಅಭಿವೃದ್ದಿಯೇ ಗುರಿ:

ಪ್ರತಿ ನಿಮಿಷವು ಕ್ಷೇತ್ರದ ಅಭಿವೃದ್ದಿಯ ಬಗ್ಗೆಯೇ ಚಿಂತಿಸುವ ಶಾಸಕರು ಮಾಡಿರುವ ಕೆಲಸಗಳ ಪಟ್ಟಿ ಅವರ ಕ್ಷೇತ್ರದಷ್ಟೆ ಉದ್ದವಾಗಿ ಬೆಳೆಯುತ್ತಾ ಹೋಗುತ್ತದೆ, ಅವರ ಕೆಲಸಗಳ ಬಗ್ಗೆ ಜನ ಕೂಡಾ ಅತ್ಯಂತ ಪ್ರೀತಿಯಿಂದ ಮುಕ್ತಕಂಠದಿಂದ ಪ್ರಶಂಸನೆ ಮಾಡುತ್ತಾರೆ.

*ಅರಸೀಕೆರೆ ನಗರದಲ್ಲಿ ಸಂಪೂರ್ಣ ಯು.ಜಿ.ಡಿ ವ್ಯವಸ್ಥೆ.
*ಅರಸೀಕೆರೆ ನಗರದಲ್ಲಿ ಕೋಟ್ಯಾಂತರ ರೂಪಾಯಿಗಳ ಹೈಟೆಕ್ ಮಾರುಕಟ್ಟೆ.
*ಅರಸೀಕೆರೆ ನಗರದಲ್ಲಿ ಕ್ರೀಡೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣ.
* ಅರಸೀಕೆರೆ ನಗರದ ಬಿ.ಹೆಚ್.ರಸ್ತೆ ಹಾಗೂ ಹಾಸನ ರಸ್ತೆಯ ಮಧ್ಯದ ಎರಡು ಕಡೆ ಹೈಮಾಸ್ಟ್ ದೀಪವನ್ನು ಅಳವಡಿಸುವ ಮೂಲಕ ನಗರದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ.
* ವಯೋವೃದ್ದರು, ಮಹಿಳೆಯರು, ಮಕ್ಕಳಿಗೆ ವಾಯುವಿಹಾರಕ್ಕೆ ಅನುಕೂಲವಾಗುವಂತೆ ಕಂತೇನಳ್ಳಿ ಬಡಾವಣೆಯಲ್ಲಿ ಅತ್ಯುತ್ತಮ ಉದ್ಯಾನವನ ನಿರ್ಮಾಣ.
* ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೇಗೇರಿಸಿದ್ದು.
* ನಗರದಲ್ಲಿ ನೆನೆಗುದಿಗೆ ಬಿದ್ದಿದ್ದ ಪ್ರತಿ ವಾರ್ಡಿನ ಉದ್ಯಾನವನಗಳ ಅಭಿವೃದ್ದಿ.
* ಮಹಾತ್ಮಗಾಂಧೀಯವರ ಚಿತಾಭಸ್ಮವಿರುವ ಜಿಲ್ಲೆಯ ಹೆಮ್ಮೆ ಕಸ್ತೂರಬಾ ಶಿಬಿರದಲ್ಲಿ 03 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ದಿ ಮಾಡುವ ಮೂಲಕ ಕಸ್ತೂರಬಾ ಶಿಬಿರವನ್ನು ದೇಶದಲ್ಲಿಯೇ ಎರಡನೆಯ ರಾಜ್ ಘಾಟ್ ಮಾಡಿದ್ದು.
* ನಗರದ ಜೆ.ಸಿ.ಆಸ್ಪತ್ರೆಯನ್ನು 100 ಹಾಸಿಗೆಯುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೇಗೇರಿಸಿದ್ದು.
*ನಗರದಲ್ಲಿ ತಳ ಸಮುದಾಯದಿಂದ ಮೇಲ್ವರ್ಗದ ಎಲ್ಲ ಬಂಧುಗಳಿಗಾಗಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲು ಸಹಕಾರಿಯಾಗಿರುವುದು.
ಇಗೇ ಪಟ್ಟಿ ಮಾಡುತ್ತಾ ಹೋದರೆ ಕೆಲಸಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಕುಡುಕುಂದಿ ಗ್ರಾಮದಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಶಿವಲಿಂಗೇಗೌಡರಿಗೆ ಸಾಮಾನ್ಯರ ಮತ್ತುರೈತರ ಬದುಕು ಎಷ್ಟು ಕಷ್ಟ ಎಂಬುದು ಬಾಲ್ಯದಿಂದಲೇ ತಿಳಿದವರು. ಕಷ್ಟದಲ್ಲಿಯೇ ವಿದ್ಯಾಭ್ಯಾಸ ಮಾಡಿ ಹಾಸನದ ಕಲಾ ಕಾಲೇಜಿನಲ್ಲಿ ಓದುವಾಗಲೇ ನಾಯಕತ್ವ ಬೆಳೆಸಿಕೊಂಡಿದ್ದ ಗೌಡರು ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ತಮ್ಮ ನಾಯಕತ್ವವನ್ನು ಗಟ್ಟಿಗೊಳಿಸಿಕೊಂಡವರು.
ವಿದ್ಯಾರ್ಥಿಗಳ ಕಷ್ಟ ಸುಖಗಳಿಗೆ ಸದಾ ಸ್ಪಂದಿಸುತ್ತಿದ್ದ ಗೌಡರು ರಂಗಭೂಮಿ ಕಲಾವಿದರು ಹೌದು. ಕಾಲೇಜಿನ ನಾಯಕತ್ವ ಗುಣವೇ ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಡಲು ಹಾಗೂ ಒಬ್ಬ ಶಾಸಕನಾಗಿ ಬೆಳೆಯಲು ಸಹಕಾರಿಯಾಗಿದ್ದು, ನನ್ನ ಬದುಕಿನುದ್ದಕ್ಕೂ ಸಾರ್ವಜನಿಕರಿಗಾಗಿಯೇ ನನ್ನ ಬದುಕನ್ನು ಮೀಸಲಿಡುತ್ತೇನೆ. ಹಾಗೂ ನನ್ನನ್ನು ರಾಜಕಾರಣದಲ್ಲಿ ಬೆಳೆಯಲು ಶಕ್ತಿ ತುಂಬಿದ ಮಾಜಿ ಪ್ರಧಾನಮಂತ್ರಿಗಳಾದ ಮಾನ್ಯ ಹೆಚ್.ಡಿ.ದೇವೆಗೌಡರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಜಿಲ್ಲೆಯ ನಾಯಕರಾದ ಹೆಚ್.ಡಿ.ರೇವಣ್ಣ ಅವರನ್ನು ಮನಪೂರ್ವಕವಾಗಿ ಸ್ಮರಿಸಿಕೊಳ್ಳುವ ಇವರು ಸಾಮಾನ್ಯ ಜನರ, ರೈತರ ಕಷ್ಟವೇ ನನ್ನ ಕಷ್ಟ ಎಂದು ತಿಳಿದು ಕೆಲಸ ಮಾಡುತ್ತಿರುವ ನನಗೆ ಕ್ಷೇತ್ರದ ಜನರ ಆಶೀರ್ವಾದವೇ ಶ್ರೀರಕ್ಷೆಯಾಗಿದೆ ಎನ್ನುತ್ತಾರೆ ಕೆ.ಎಂ.ಶಿವಲಿಂಗೇಗೌಡರು.


Post a Comment

Previous Post Next Post