ಬೇಲೂರು:ಇಲ್ಲಿನ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಕೋವಿಡ್‍ಗೆ
ಸಂಬಂಧಿಸಿದಂತೆ ಅಧಿಕಾರಿಗಳ ಹಾಗೂ ಪುರಸಭ ಸದಸ್ಯರ ಸಭೆ
ಆಯೋಜನೆ ಮಾಡಲಾಗಿತ್ತು.
ಶಾಸಕ ಕೆ.ಎಸ್.ಲಿಂಗೇಶ್ ಅಧ್ಯಕ್ಷತೆಯಲ್ಲಿ ನಡೆದ
ಸಭೆಯಲ್ಲಿ ಮಾತನಾಡಿದ ಪುರಸಭ ಸದಸ್ಯ ಜಿ.ಶಾಂತಕುಮಾರ್,
ವಾಟ್ಸಾಪ್, ಫೇಸ್‍ಬುಕ್‍ಗಳಲ್ಲಿ ಕರೋನಾ ಕಾಯಿಲೆಗೆ ಔಷಧಿಗಳ
ಪಟ್ಟಿ ಹರಿದಾಡುತ್ತಿವೆ. ರೋಗದ ಲಕ್ಷಣ ಇರುವವರು ಪರೀಕ್ಷೆಗೆ
ಒಳಗಾಗದೆ ಔಷಧಿ ಅಂಗಡಿಗೆ ತೆರಳಿ ಔಷಧಿ, ಮಾತ್ರೆಗಳ
ತೆಗೆದುಕೊಳ್ಳುವುದು ನಡೆಯುತ್ತಿದೆ. ಇದರಿಂದ
ಅಡ್ಡಪರಿಣಾಮ ಆಗುವ ಸಾಧ್ಯತೆಯಿದೆ. ಆದ್ದರಿಂದ ಔಷಧಿ
ಅಂಗಡಿಗಳ ಮಾಲೀಕರ ಸಭೆ ಕರೆದು ಔಷಧಿ ನೀಡದಂತೆ ತಿಳಿ
ಹೇಳುವ ಅಗತ್ಯವಿದೆ ಮತ್ತು ಪರೀಕ್ಷೆಗೆ ಒಳಪಟ್ಟ ಸಂದರ್ಭ
ರೋಗ ಲಕ್ಷಣಗಳು ಕಂಡುಬಂದರೆ ಕೂಡಲೆ ಕ್ವಾರಂಟೈನ್
ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.
ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಖಾಸಗಿ ಆಸ್ಪತ್ರೆ,
ಕ್ಲಿನಿಕ್‍ಗಳಲ್ಲಿ ರೋಗಿಗಳು ಬಂದಾಗ ಸಾಮಾಜಿಕ ಅಂತರ
ಕಾಯ್ದುಕೊಳ್ಳುವಲ್ಲಿ ಗಮನಹರಿಸಬೇಕು. ಸ್ಥಳದ
ತೊಂದರೆ ಕಾರಣ ನೀಡದೆ ಪರ್ಯಾಯ ವ್ಯವಸ್ಥೆ
ಕಲ್ಪಿಸಿಕೊಳ್ಳಬೇಕು, ಕರೋನಾ ಲಕ್ಷಣಗಳು ಕಂಡುಬಂದಲ್ಲಿ
ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡು ಬರುವಂತೆ
ಸೂಚಿಸಬೇಕು. ಟಾಸ್ಕ್‍ಫೋರ್ಸ್ ಕಮಿಟಿಯವರು ಕರೋನಾ
ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಹಾಗೂ
ಸೋಂಕಿತರನ್ನು ಕೋವಿಡ್ ಸೆಂಟರ್‍ಗೆ ಕರೆತರುವ ಕೆಲಸ
ಮಾಡಬೇಕೆಂದು ಸೂಚಿಸಿದರು.
ಉಪ ವಿಭಾಗಾಧಿಕಾರಿ ಗಿರೀಶ್‍ನಂದನ್ ಮಾತನಾಡಿ, ಖಾಸಗಿ
ಕ್ಲಿನಿಕ್‍ಗಳಲ್ಲಿ ಜ್ವರ, ಶೀತ, ಕೆಮ್ಮು ಇರುವ ವ್ಯಕ್ತಿಗಳಿಗೆ ಚಿಕಿತ್ಸೆ
ನೀಡುತ್ತಿರುವುದರಿಂದ ಕರೋನಾ ಚಿಕಿತ್ಸೆಗೆ ಒಳಗಾಗದೆ
ಸೋಂಕು ಹೆಚ್ಚಾಗಲು ಕಾರಣವಾಗುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ
ಕಡ್ಡಾಯವಾಗಿ ಕರೊನಾ ಪರೀಕ್ಷೆ ಮಾಡಿಸುವಂತೆ
ಕಳುಹಿಸಬೇಕು. ಖಾಸಗಿ ವೈದ್ಯರುಗಳು ತಾಲ್ಲೂಕು
ಆಡಳಿತದೊಂದಿಗೆ ಸಹಕರಿಸಬೇಕು. ಇದನ್ನು ಮೀರಿ ಚಿಕಿತ್ಸೆ
ಮುಂದುವರಿಸಿದರೆ ಶಿಸ್ತುಕ್ರಮ ಅನಿವಾರ್ಯ ಎಂದು ತಿಳಿಸಿದರು. ಡಾ.ನಾರಾಯಣಸ್ವಾಮಿ, ಡಾ.ಚಂದ್ರಮೌಳಿ, ಡಾ.ಸಂತೋಷ್, ಪುರಸಭೆ ಸದಸ್ಯ ಬಿ.ಗಿರೀಶ್, ಜಮಾಲುದ್ದೀನ್, ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ತಹಸೀಲ್ದಾರ್ ಎನ್.ವಿ.ನಟೇಶ್, ತಾಲ್ಲೂಕು ವೈದ್ಯಾಧಿಕಾರಿ ವಿಜಯ್, ಪಿಎಸ್‍ಐ ಹೆಸ್.ಜಿ.ಪಾಟೀಲ್, ಪುರಸಭ ಮುಖ್ಯಾಧಿಕಾರಿ ಸುಜಯ್‍ಕುಮಾರ್, ಆಶಾಕಾರ್ಯ ಕರ್ತೆಯರು ಇದ್ದರು.