ಬೇಲೂರು: ಹಿಂದೂ ರುದ್ರಭೂಮಿಗೆ ಸ್ಥಳ ಗುರುತಿಸಿಕೊಡದ
ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ
ಗ್ರಾಮಸ್ಥರು ಮೃತದೇಹವೊಂದನ್ನು ಸಂಸ್ಕಾರ ಮಾಡಲು
ಬಿಡದೆ ಅಡ್ಡಿಪಡಿಸಿದ ಘಟನೆ ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ಇಂದು ನಡೆಯಿತು.
ರುದ್ರಭೂಮಿ ಸ್ಥಳದಲ್ಲಿ ಸುದ್ದಿಗಾರರೊಂದಿಗೆ
ಮಾತನಾಡಿದ ಗ್ರಾಮದ ಮುಖಂಡ ಮಂಜುಸ್ವಾಮಿ,
ಚೇತನ್‍ಕುಮಾರ್, ಸರ್ಕಾರಕ್ಕೆ ಸೇರಿದ ಭೂಮಿ ಇದ್ದರೂ
ರಾಜಕೀಯ ಕಾರಣಗಳಿಗಾಗಿ ಹೊರಗಡೆಯಿಂದ ಬಂದು ವಾಸವಿರುವ
ಕೆಲವು ವ್ಯಕ್ತಿಗಳು ಸ್ಥಳವನ್ನು ಒತ್ತುವರಿ ಮಾಡಿಕೊಂಡು ಇಡಿ
ಪ್ರದೇಶವನ್ನು ತಮ್ಮದಾಗಿಸಿಕೊಳ್ಳಲು ಹೊರಟಿದ್ದಾರೆ. ಕಳೆದ
30 ವರ್ಷದಿಂದಲೂ ವಿವಾದ ಹಾಗೆ ಉಳಿದಿದೆ. ಅಧಿಕಾರಿಗಳನ್ನು ಹಾಗೂ
ಗ್ರಾಮ ಪಂಚಾಯಿತಿಯವರನ್ನು ಭೇಟಿ ಮಾಡಿ ರುದ್ರಭೂಮಿಗೆ
ಸ್ಥಳ ಗುರುತಿಸಿಕೊಡುವಂತೆ ಹಲವು ಬಾರಿ ಮಾಡಿದ್ದೇವೆ.
ಭರವಸೆ ಕೊಡುತ್ತಾರೆ ಆನಂತರ ಸುಮ್ಮನಾಗುತ್ತಾರೆ, ಇಲ್ಲಿ
ಪ್ರಭಾವಿಗಳ ಕೈವಾಡ ಹೆಚ್ಚಾಗಿದೆ ಎಂದು ಆರೋಪಿಸಿದರು.
ಆರಂಭ ವರ್ಷದಲ್ಲಿ ಗ್ರಾಮದ ಜನಸಂಖ್ಯೆ ಕಡಿಮೆ ಇತ್ತು
ಹೇಗೋ ನಡೆದುಹೋಗುತ್ತಿತ್ತು. ಇದೀಗ ಈ ಭಾಗದಲ್ಲಿ
ಬಿಕ್ಕೋಡು, ಕುವೆಂಪುನಗರ, ಚೋಕನಹಳ್ಳಿ, ಇಂದಿರಾನಗರ
ಸೇರಿದಂತೆ 6 ಬಡಾವಣೆ ಸೇರಲಿದ್ದು 2 ಸಾವಿರ ಮನೆಗಳು ಇವೆ.
ಇಲ್ಲಿಗೆ ವಲಸೆಗಾರರು ಹೆಚ್ಚಾಗಿದ್ದಾರೆ. ರುದ್ರಭೂಮಿಗೆ ಅಗತ್ಯ
ಭೂಮಿ ಅವಶ್ಯಕವಿದೆ. ರುದ್ರಭೂಮಿಗೆ ಸ್ಥಳ
ಗುರುತಿಸಿಕೊಡುವಂತೆ ಒತ್ತಾಯಿಸಿದಾಗ ಸರ್ವೆ ಮಾಡಲು
ಆಗಮಿಸಿದ ಅಧಿಕಾರಿಗಳು ನಂತರ ಸರ್ವೆ ಮಾಡಲು
ವಾಪಸ್ಸಾಗಿದ್ದಾರೆ.
ಈ ಸ್ಥಳದಲ್ಲಿ 4 ಎಕರೆಯಷ್ಟು ಭೂಮಿ ಇದ್ದರೂ ಇದೀಗ
ಒತ್ತುವರಿ ಮಾಡಿರುವುದರಿಂದ ಕೇವಲ 15 ಗುಂಟೆಯಷ್ಟು
ಮಾತ್ರ ಇದೆ. ಒತ್ತುವರಿ ಆಗಿರುವ ಸ್ಥಳ ಬಿಡಿಸದ ಹೊರತು
ಸಮಸ್ಯೆ ಬಗೆಹರಿಯುವುದಿಲ್ಲ. ಸರ್ವೆಗೆ ಅಧಿಕಾರಿಗಳು ಮುಂದಾದ
ಸಂದರ್ಭ ಬಲಾಢ್ಯರು ಬೇರೆ ರೀತಿಯಲ್ಲಿ ಒತ್ತಡ ಹೇರಿ
ಸುಮ್ಮನಾಗಿಸುವುದು ನಡೆಯುತ್ತಿದೆ. ಇದು ಸಮಸ್ಯೆ
ಜೀವಂತವಾಗಿ ಉಳಿಯಲು ಕಾರಣವಾಗಿದೆ ಎಂದು ದೂರಿದರು.
ಕೆಲವರ ಹಿತ ಕಾಯಲು ರುದ್ರಭೂಮಿಗೆ
ಸ್ಥಳವಿಲ್ಲದಂತೆ ಅಧಿಕಾರಿಗಳು ಮಾಡತೊಡಗಿದ್ದಾರೆ. ಇದೆ
ಕಾರಣಕ್ಕೆ ಇಂದು ಬಿಕೋಡಿನಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ
ಮೃತದೇಹ ಹೂಳಲು ಅವಕಾಶ ನೀಡಿರಲಿಲ್ಲ, ಆನಂತರ
ಮಾನವೀಯ ದೃಷ್ಟಿಯಿಂದ ಅವಕಾಶ ಮಾಡಿಕೊಟ್ಟಿದ್ದೇವೆ.
ಇನ್ನುಮುಂದೆ ಯಾರ ಸತ್ತರೂ ಈ ಸ್ಥಳದಲಿ ಸಂಸ್ಕಾರಕ್ಕೆ
ಅವಕಾಶ ನೀಡುವುದಿಲ್ಲ. ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ
ಅಧಿಕಾರಿಗಳು ನಿರ್ಲಕ್ಷ್ಯ ತಾಳಿರುವುದೆ ಪ್ರಮುಖ ಕಾರಣವಾಗಿದೆ.
ಇನ್ನುಮುಂದೆ ಈ ಸ್ಥಳದಲ್ಲಿ ಯಾರದೆ ಮೃತದೇಹ
ಹೂಳಲು ಅವಕಾಶ ನೀಡುವುದಿಲ್ಲ. ಸಮಸ್ಯೆ ಶೀಘ್ರ
ಬಗೆಹರಿಸಿಕೊಡದಿದ್ದಲ್ಲಿ ಮುಂದೆ ಯಾರಾದರೂ ಮೃತರಾದರೆ
ಅವರ ಮೃತದೇಹವನ್ನು ಗ್ರಾಮ ಪಂಚಾಯಿತಿ ಮುಂದೆ ಇಟ್ಟು
ಪ್ರತಿಭಟನೆ ನಡೆಸುವುದಲ್ಲದೆ ಆ ಸ್ಥಳದಲ್ಲೇ ಸಂಸ್ಕಾರ
ಮಾಡುತ್ತೇವೆ ಎಂದು ಎಚ್ಚರಿಸಿದರು. ಈ ಸಂದರ್ಭ ಹಾಜರಿದ್ದ
ಬಿಕ್ಕೋಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜಶೇಖರ್, ಸದಸ್ಯಸಿ.ಕುಮಾರ್, ಪಂಚಾಯಿತಿ ಕಾರ್ಯದರ್ಶಿ ದೇವರಾಜು ಇವರುಗಳು ಶೀಘ್ರವೆ ಸಮಸ್ಯೆ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು. ಮಾಜಿ ಸದಸ್ಯ ಖಲಂದರ್, ಮಂಜುನಾಥ, ಯೋಗೇಶ್, ಇಸ್ಮಾಯಿಲ್, ಗಿರೀಶ್ ಇದ್ದರು.
