ಹಾಸನ: ಈ ರಾಜ್ಯದಲ್ಲಿರುವ ಆರೋಗ್ಯ ಇಲಾಖೆಯನ್ನು ಕಗ್ಗತ್ತಲಿನಲ್ಲಿ ಇಟ್ಟು ಜನರ ಪ್ರಾಣದ ಜೊತೆ ಸರಕಾರದ ಚೆಲ್ಲಾಟ ಆಡುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಗಂಭೀರವಾಗಿ ಮನವಿ ಮಾಡಿದರು..
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದ್ದು, ಕಡಿಮೆ ಆಗುತ್ತಿಲ್ಲ. ಆರೋಗ್ಯ ಸಚಿವರೇ ಐವತ್ತು ವೆಂಟಿಲೇಟರ್ ನೀಡುವುದಾಗಿ ಹೇಳಿದ್ದರೂ ಇದುವರೆಗೂ ಒಂದೇ ಒಂದು ವೆಂಟಿಲೇಟರ್ ಬಂದಿರುವುದಿಲ್ಲ. ಚಾಮರಾಜ ನಗರದ ಹೆಸರು ಹೇಳುತ್ತೇವೆ ಆದರೇ ಆಕ್ಸಿಜನ್ ಇಲ್ಲದೇ ಹಾಸನದಲ್ಲಿ ಸೋಮವಾರ ಒಂದೆ ದಿನ ೨೯ ಜನರು ತೀರಿ ಹೋಗಿದ್ದಾರೆ. ಜಿಲ್ಲೆಗೆ ದಿನಕ್ಕೆ ಕನಿಷ್ಟ ಎಂದರೆ ೧೨೦೦ ಸಿಲೆಂಡರ್ ಅವಶ್ಯಕವಾಗಿದೆ. ಆರ್ಟಿಪಿಆರ್ ಪರೀಕ್ಷೆ ನಡೆಸಿ ಆರು ದಿನದ ನಂತರ ವರದಿ ಬರುತ್ತಿದೆ. ಇದರಿಂದ ಕಳೆದೊಂದು ವಾರದಿಂದ ೨೪೦೦ ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಔಷಧಿ ಕೊರತೆಯು ಕಾಡುತ್ತಿದೆ. ವೈದ್ಯರ ಕೊರತೆ ಇದೆ. ಶೀಘ್ರದಲ್ಲೇ ವೈದ್ಯರ ಹುದ್ದೆ ಭರ್ತಿ ಮಾಡುತ್ತೇವೆ ಎಂದು ಆರೋಗ್ಯ ಸಚಿವರು ಹೇಳಿದ್ದರೂ ಇನ್ನೂ ನೇಮಕ ಮಾಡಿಲ್ಲ.
ರಾಜ್ಯದಲ್ಲಿ ಹೇಳೋರು ಕೇಳೋರು ಇಲ್ಲದಂತಾಗಿದೆ. ಇಂತಹ ಕೆಟ್ಟ ಪರಿಸ್ಥಿತಿ ನಾವು ನೋಡುತ್ತಿದ್ದೇವೆ. ಜನರ ಪ್ರಾಣದ ಮೇಲೆ ರಾಜ್ಯ ಸರಕಾರ ಚೆಲ್ಲಾಟ ಆಡುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.
ಹಾಸನ ಜಿಲ್ಲೆಯಲ್ಲಿ ದಿನಕ್ಕೆ ೧೦ ರಿಂದ ೧೫ ಜನರು ಆಕ್ಸಿಜನ್ ಇಲ್ಲದೆ ಸಾಯುತಿದ್ದು, ಇದನ್ನು ರಾಜ್ಯ ಸರಕಾರವು ಗಂಬೀರವಾಗಿ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು. ೧೦ ದಿನದಲ್ಲಿ ೩೦೦ ಜನ ಜಿಲ್ಲೆಯಲ್ಲಿ ಸಾವನಪ್ಪಿದ್ದಾರೆ. ಇನ್ನು ಹೆಚ್ಚು ಸಾವನಪ್ಪುತ್ತಿದ್ರೂ ಸರ್ಕಾರ ಸಾವಿನ ಪ್ರಮಾಣವನ್ನು ಮುಚ್ಚಿಡುತ್ತಿದೆ. ಹಳ್ಳಿಗಳಲ್ಲಿ ಸಾಯುವವರ ಲೆಕ್ಕ ಸಿಗುತ್ತಿಲ್ಲ. ಹಾಸನ ಜಿಲ್ಲೆಯಲ್ಲಿ ಸೋಮವಾರ ಒಂದೆ ದಿನದಲ್ಲಿ ೩೦ ಜನರು ಮೃತಪಟ್ಟಿದ್ದಾರೆ. ಜಿಲ್ಲಾದ್ಯಂತ ಬೆಡ್ ಗಳ ಕೊರತೆ ಇದೆ, ಆಕ್ಸಿಜನ್, ವೆಂಟಿಲೇಟರ್ ಮತ್ತು ರೆಮ್ ಡಿಸಿವರ್ ಕೊರತೆ ಹಾಗೂ ಹಳ್ಳಿಗಳಲ್ಲಿ ಚಿಕಿತ್ಸೆ ಸಿಗದ ಸಾಕಷ್ಟು ಜನ್ರು ಮೃತಪಟ್ಟಿದ್ದಾರೆ ಎಂದು ಸರಕಾರದ ವಿರುದ್ಧ ಗುಡುಗಿದರು.
ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರ ಮಾಡುವವರಾದ ತರಕಾರಿ, ಹೂವು ಮಾರುವವರು, ಆಟೋ ಚಾಲಕರು, ಜಟಕ ಕುದುರೆಗಾರರ ಪರಿಸ್ಥಿತಿ ಹೇಳತೀರದು. ಬೆಳಿಗ್ಗೆ ಬಡ್ಡಿಗೆ ಸಾಲ ಪಡೆದು ಬಂಡವಾಳ ಹಾಕಿರುತ್ತಾರೆ. ಆದರೇ ವ್ಯಾಪಾರ ಮಾಡಲು ಸಮಯವಿಲ್ಲದೇ ನಷ್ಟ ಅನುಭವಿಸಿ ಹಣ ವಾಪಸ್ ಕೊಡಲು ಸಮಸ್ಯೆ ಎದುರಿಸುತ್ತಿದ್ದು, ಹೀಗೆ ಮುಂದುವರೆದರೇ ವಿಷ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇಂತವರಿಗೆ ಸರಕಾರವು ಅಕ್ಕಿ, ರಾಗಿ, ಗೋದಿ ಜೊತೆಗೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ ೫ ಸಾವಿರ ರೂಗಳನ್ನು ಕೊಡಬೇಕೆಂದು ಆಗ್ರಹಿಸಿದರು.
ಚನ್ನರಾಯಪಟ್ಟಣದ ಪತ್ರಕರ್ತರಾದ ಸ್ವಾಮಿಗೌಡ ಅವರು ಕೊರೋನಾ ಪಾಸಿಟಿವ್ ಬಂದು ಸಾವನಪ್ಪಿದ್ದು, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ನಾ ಪ್ರಾರ್ಥಿಸುವೆ. ಕುಟುಂಬಕ್ಕೆ ಐದು ಲಕ್ಷ ರೂಗಳ ಪರಿಹಾರ ನೀಡಬೇಕು, ಹಾಗೂ ಎಲ್ಲಾ ಪತ್ರಕರ್ತರಿಗು ವಿಮೆ ಕಲ್ಪಿಸುವ ಮೂಳಕ ನೆರವಾಗಬೇಕು ಎಂದು ಹೇಳಿದರು. ಪ್ರಧಾನಿಗಳು ಅಧಿಕಾರಿಗಳೊಂದಿಗೆ ವಿಸಿ ನಡೆಸಲಿದ್ದಾರೆ. ಆದರೇ ಶಾಸಕರೊಂದಿಗೆ ಇಲ್ಲ ಎಂದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಚರ್ಚಿಸುವುದಾಗಿ ಹೇಳಿದರು.