ಬೇಲೂರು: ಲಾಕ್ ಡೌನ್ ಹಿನ್ನಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ತರಕಾರಿ ಮಾರುಕಟ್ಟೆ ಸ್ಥಳಾಂತರ ಮಾಡಿದ್ದು ಮಾರಾಟದ ನಂತರ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬೇಕಾಬಿಟ್ಟಿ ಎಸೆದಿದ್ದು ಪುರಸಭೆ ಸ್ವಚ್ಛ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ
ರುದ್ರನರ್ತನ ಮಾಡುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ
ಸರ್ಕಾರ ಲಾಕ್‍ಡೌನ್ ನಿಯಮವನ್ನು ಜಾರಿಗೊಳಿಸಿ ಅಗತ್ಯ
ತರಕಾರಿಗಳ ಖರೀದಿಗೆ ವಾರದಲ್ಲಿ ಮೂರುದಿನ ಅವಕಾಶ ನೀಡಲು ಪಟ್ಟಣದ ಬಸ್ ನಿಲ್ದಾಣವನ್ನು ಮಾರುಕಟ್ಟೆಯಾಗಿ ಮಾರ್ಪಡಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದೆ. ಆದರೆ ತರಕಾರಿ ವ್ಯಾಪಾರಕ್ಕೆ ಹತ್ತು ಗಂಟೆಯವರೆಗೆ ಮಾತ್ರ ಅವಕಾಶವಿದ್ದು ನಂತರ ತರಾತುರಿಯಲ್ಲಿ ಉಳಿದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ .
ವ್ಯಾಪಾರ ಮುಗಿದ ಬಳಿಕ ಬಸ್ ನಿಲ್ದಾಣ ಕಸದ ತೊಟ್ಟಿಯಾಗಿ
ಮಾರ್ಪಟ್ಟಿರುತ್ತದೆ. ಆದರೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು
ಸ್ವಚ್ಛಗೊಳಿಸಲು ಮುಂದಾಗಿಲ್ಲ. ಮಂಗಳವಾರ
ಮಧ್ಯಾಹ್ನದವರೆಗೂ ಕಸ ವಿಲೇವಾರಿ ಮಾಡದೆ ಬಸ್ ನಿಲ್ದಾಣದಲ್ಲಿ ತ್ಯಾಜ್ಯ ವಸ್ತುಗಳಿಂದ ಗಬ್ಬುನಾರುತ್ತಿದೆ.
ನಿಲ್ದಾಣದಲ್ಲಿ ವ್ಯಾಪಾರಕ್ಕೆ ಬಂದ ವ್ಯಾಪಾರಸ್ಥರಿಗೆ ಮತ್ತು
ಸಾರ್ವಜನಿಕರಿಗೆ ಕೊಳೆತು ನಾರುತ್ತಿರುವ ರಾಶಿ ಕಸದಿಂದ
ಸಾಂಕ್ರಾಮಿಕ ರೋಗ ಹರಡುವ ಭಯ ಕಾಡುತ್ತಿದೆ. ವ್ಯಾಪಾರ-
ವಹಿವಾಟು ಮುಗಿದ ನಂತರ ಒಂದು ದಿನವಾದರೂ
ಸ್ವಚ್ಛಗೊಳಿಸದೆ ಪುರಸಭೆ ನಿರ್ಲಕ್ಷ ತೋರುತ್ತಿದ್ದು
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಛತೆಗೆ ಹೆಚ್ಚಿನ
ಒತ್ತನ್ನು ನೀಡಿ ಸಾಂಕ್ರಾಮಿಕ ರೋಗ ಮತ್ತು ಕಸದಿಂದ
ಮುಕ್ತಿ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ .
