ಅನಂತರಾಜೇಅರಸು ಬೇಲೂರು:
ಕನ್ನಡದ ಪ್ರಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಶಾಸನದ ಪ್ರತಿಕೃತಿ ಮಂಟಪ ಇಂದು ಕೇಳುವವರಿಲ್ಲದ ಹಾಳು ಮಂಟಪವಾಗಿದೆ.
ಪ್ರತಿಕೃತಿ ಮಂಟಪವಷ್ಟೇ ಅಲ್ಲದೆ, ಕೆಲವೊಂದು ಶಾಸನ ಇನ್ನಿತರ ಶಿಲ್ಪಗಳನ್ನು ಹಾಗೂ ಪ್ರತಿಕೃತಿ ಮಂಟಪ ಉದ್ಘಾಟನೆಗೆ ಸಂಬಂಧಿಸಿದ ಫಲಕಗಳು ಇಲ್ಲಿವೆ. ಇದೆ ಆವರಣದಲ್ಲಿ ಕನ್ನಡ ಹಾಗೂ ರಾಷ್ಟ್ರಧ್ವಜಾರೋಹಣ ನಡೆಸುವ ಧ್ವಜಸ್ಥಂಭವೂ ಇದೆ. ಆದರೆ ಇದೀಗ ಶಿಲಾ ಶಾಸನದ ಈ ಪ್ರತಿಕೃತಿ ಮಂಟಪದ ಆವರಣವು ಪಾರ್ಥೇನಿಯಂ ಗಿಡಗಳಿಂದ ಆವೃತ್ತವಾಗಿದೆ. ಪ್ರತಿಕೃತಿ ಮಂಟಪದ ಸುತ್ತ ಕಾಂಪೌಂಡ್ ನಿರ್ಮಾಣ ಆಗಿರುವುದರಿಂದ ಬಹುಷಃ ಮಂಟಪವೂ ಸೇರಿದಂತೆ ಎಲ್ಲಾ ವಸ್ತುಗಳು ಉಳಿದುಕೊಂಡಿದ್ದು ಕಾಂಪೌಂಡ್ ಇಲ್ಲದೆ ಇದ್ದಿದ್ದರೆ ಎಲ್ಲವೂ ಹಾಳಾಗುತ್ತಿದ್ದವೇನೊ.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿದ್ದ ಹೆಚ್.ಬಿ.ಮದನಗೌಡ ಹಾಗೂ ತಾಲ್ಲೂಕು ಕಸಾಪ ಅಧ್ಯಕ್ಷರಾಗಿದ್ದ ಅನಂತರಾಜೇಅರಸು ಅವರ ಅವಧಿಯಲ್ಲಿ ಅಂದಿನ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಆಡಳಿತ, ಅಧಿಕಾರಿಗಳ, ಸಂಘ ಸಂಸ್ಥೆಗಳ ಸಹಕಾರ ಮತ್ತು ಹಲ್ಮಿಡಿ ಗ್ರಾಮದ ನಾರಾಯಣಗೌಡ ಕುಟುಂಬದವರು ನೀಡಿದ ನಿವೇಶನ ಧಾನದ ಪರಿಣಾಮ 2003 ರಲ್ಲಿ ಪ್ರತಿಕೃತಿ ನಿರ್ಮಾಣಗೊಂಡಿತ್ತು. 2003 ಅಕ್ಟೋಬರ್ 10 ರಂದು ಪ್ರತಿಕೃತಿ ಮಂಟಪದ ಉದ್ಘಾಟನೆ ಆಗುವ ವೇಳೆ ನಾಡಹಬ್ಬದಂತೆ ಸಮಾರಂಭ ಆಯೋಜನೆಗೊಂಡಿತ್ತು. ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದಿತ್ತು. ಆನಂತರವೂ ಹಲ್ಮಿಡಿ ಉತ್ಸವ, ಹೊಯ್ಸಳ ಉತ್ಸವ
ಹೆಸರಿನಲ್ಲಿ ಹಲವು ಕಾರ್ಯಕ್ರಮಗ ಜರುಗಿದ್ದವು. ಜಯಕರ್ನಾಟಕ ಸಂಘಟನೆಯಿಂದ ಹಲ್ಮಿಡಿ ಗ್ರಾಮಕ್ಕೆ ಸ್ವಾಗತ
ಕಮಾನು ಸಹ ಸ್ಥಾಪನೆ ಮಾಡಿಕೊಡಲಾಯಿತು. ಹಲ್ಮಿಡಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಕನ್ನಡಭವನ ನಿರ್ಮಾಣವಾಯಿತು.
ಆದರೆ ಈಗ ಈ ಭವ್ಯ ಪ್ರತಿಕೃತಿಮಂಟಪ ಯಾರಿಗೂ ಬೇಡವಾದ ಪಾಳುಬಿದ್ದ ಮಂಟಪವಾಗಿದೆ. ಗಿಡಗೆಂಟೆಗಳು
ಬೆಳೆದುನಿಂತಿದೆ. ಗ್ರಾಮದವರೇ ಆದ ನಾರಾಯಣಪುರ ಗ್ರಾಮ ಪಂಚಾಯತಿ ಸದಸ್ಯರಾದ ಮೋಹನ್, ವಿನೋದ, ವಸಂತ ಇಲ್ಲಿದ್ದರೂ ಪ್ರತಿಕೃತಿ ಮಂಟಪವನ್ನು ಸ್ವಚ್ಛವಾಗಿಡುವಲ್ಲಿ ಏಕೆ ಗಮನ ಹರಿಸಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ನಾರಾಯಣಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೇಮಾವತಿ ಹಾಗೂ ಪಂಚಾಯಿತಿ
ಪಿಡಿಒ ರಾಜಶೇಖರ್ ಅವರಾದರೂ ಹಲ್ಮಿಡಿಯ ಕನ್ನಡ ಶಾಸನದ ಪ್ರತಿಕೃತಿ ಮಂಟಪದ ಬಗ್ಗೆ ಕಾಳಜಿ ಏಕಿಲ್ಲ ಎಂಬುದು ಸಾರ್ವಜನಿಕ ಪ್ರಶ್ನೆ.
ನಾರಾಯಣಪುರ ಗ್ರಾಮ ಪಂಚಾಯಿತಿ ಆಡಳಿತ ಹಲ್ಮಿಡಿ ಗ್ರಾಮದ ಈ ಕನ್ನಡ ಶಾಸನದ ನೆನಪಿನ ಮಂಟಪದ ನಿರ್ವಹಣೆಗೆಂದೇ ವಾರ್ಷಿಕವಾಗಿ ಬಜೆಟ್‍ನಲ್ಲಿ ಇಂತಿಷ್ಟು ಅನುದಾನ ತೆಗೆದಿರಿಸಿಕೊಂಡು ನಿರ್ವಹಣೆ ಮಾಡಲು ಅವಕಾಶ
ಮಾಡಿಕೊಳ್ಳಬಹುದಿತ್ತಾದರೂ ಏಕಾಗಿ ನಿರ್ಲಕ್ಷ್ಯ ತಾಳಿದೆ ಎಂಬುದಕ್ಕೆ ಉತ್ತರ ಬೇಕಿದೆ.
ಗ್ರಾಮದಲ್ಲಿರುವ ಹಲ್ಮಿಡಿ ಶಾಸನ ಗ್ರಾಮಾಭಿವೃದ್ಧಿ ಟ್ರಸ್ಟ್ ಕನ್ನಡ ರಾಜ್ಯೋತ್ಸವ ಸಂದರ್ಭ ನಡೆಯುವ ಕಾರ್ಯಕ್ರಮಕ್ಕೆ ಪೂರಕವಾಗಿ ಮಂಟಪದ ಆವರಣ ಸ್ವಚ್ಛಗೊಳಿಸಿ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬರುತ್ತಿದ್ದರೂ ಉಳಿದ ದಿನದಲ್ಲಿನ ವ್ಯವಸ್ಥೆ ಬಗ್ಗೆ ಮೌನವೇಕೆಂದು ತಿಳಿದಿಲ್ಲ. ಹಲ್ಮಿಡಿ ಗ್ರಾಮವನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕೆಂಬ ಕೂಗು ಇರುವ ನಡುವೆಯೇ ಪ್ರತಿಕೃತಿ ಮಂಟಪದ ಸ್ಥಿತಿ ಹೀಗಾದರೆ ಇನ್ನೂ ಈ ಗ್ರಾಮ ಪ್ರವಾಸಿ ಕೇಂದ್ರವಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಇದೆ.ಒಟ್ಟಾರೆ, ಕನ್ನಡದ ಪ್ರಥಮ ಶಿಲಾಶಾಸನ ದೊರೆತ ಹಲ್ಮಿಡಿ ಗ್ರಾಮದಲ್ಲಿರುವ ಈ ಪ್ರತಿಕೃತಿ ಮಂಟಪ ಶಾಶ್ವತವಾಗಿ ಉಳಿಯಬೇಕು. ಇದರ ನಿರ್ವಹಣೆಗೆ ನೀಲಿನಕ್ಷೆಯೊಂದು ಸಿದ್ದಗೊಳ್ಳಬೇಕು. ಈ ಬಗ್ಗೆ ಬೇಲೂರು ತಾಲ್ಲೂಕು ಆಡಳಿತ, ಜಿಲ್ಲಾ ಪಂಚಾಯಿತಿ ಆಡಳಿತ ಯೋಜನೆಯೊಂದನ್ನು ರೂಪಿಸುವ ಅಗತ್ಯವಿದ್ದು ಶೀಘ್ರವೇ ಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ
ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಹಲ್ಮಿಡಿ ಗ್ರಾಮವಿಂದು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಪ್ರತಿಕೃತಿ ಮಂಟಪ ಇರುವ ಸ್ಥಳದಲ್ಲಿ ಪಾರ್ಥೇನಿಯಂ ಬೆಳೆದು ನಿಂತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಸೂಕ್ತ ಕ್ರಮದ ಅಗತ್ಯವಿದೆ.
-ಚಂದ್ರಶೇಖರ್, ಕರವೇ ತಾ.ಅಧ್ಯಕ್ಷ
(ನಾರಾಯಣಗೌಡ ಬಣ)
ಕನ್ನಡ ಭಾಷೆಯ ಲಿಪಿಯ ಶಾಸನ ದೊರೆತ ಹಲ್ಮಿಡಿ ಗ್ರಾಮದಲ್ಲಿ ಶಾಸನದ ಪ್ರತಿಕೃತಿ ಮಂಟಪ ನಿರ್ಮಾಣ ಮಾಡಿ ಗ್ರಾಮಕ್ಕೆ ಭೇಟಿ ನೀಡುವವರಿಗೆ ಶಾಸನದ ಮಾಹಿತಿ ಲಭ್ಯವಾಗುವಂತೆ ಮಾಡಲಾಗಿದ್ದು ಇದೀಗ ಈ ಸ್ಥಳ ಅವನತಿಯತ್ತ ಸಾಗುತ್ತಿರುವುದು ನೋವಿನ ಸಂಗತಿ. ನಾರಾಯಣಪುರ ಗ್ರಾಮ ಪಂಚಾಯಿತಿ ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
-ಬೋಜೇಗೌಡ, ಕರವೇ ಅಧ್ಯಕ್ಷ (ಪ್ರವೀಣಶೆಟ್ಟಿಬಣ)
-------------------
ಹಲ್ಮಿಡಿ ಗ್ರಾಮದಲ್ಲಿ ಕನ್ನಡದ ಮೊದಲ ಶಿಲಾಶಾಸನ ದೊರೆತಿರುವುದು ಇಡಿ ತಾಲ್ಲೂಕಿನ ನಮ್ಮ ಪುಣ್ಯ. ಅಲ್ಲಿ ಸಿಕ್ಕಿದ ಶಾಸನದ ಅಕ್ಷರಗಳು ಹೇಗಿದ್ದವು, ಅದರ ಅರ್ಥವೇನು ಎಂಬುದರ ಮಾಹಿತಿ ಹಾಗೂ ಪ್ರತಿಕೃತಿಯನ್ನು ಪ್ರತಿಷ್ಠಾಪಿಸಿ
ಮಂಟಪ ನಿರ್ಮಾಣ ಮಾಡಿರುವುದನ್ನು ಉಳಿಸಿಕೊಂಡು ಹೋಗಬೇಕಿದೆ. ಇದೀಗ ಪಾರ್ಥೇನಿಯಂ ಗಿಡಗಳ
ಬೆಳೆದಿರುವುದು ಬೇಸರದ ಸಂಗತಿ. ಸ್ಥಳೀಯ ಆಡಳಿತ ತಕ್ಷಣ ಕಾರ್ಯಪ್ರವೃತ್ತರಾಗಬೇಕಿದೆ.
-ಸನ್ಯಾಸಿಹಳ್ಳಿ ರಾಜಣ್ಣ, ಜಯಕರ್ನಾಟಕ
ತಾ.ಅಧ್ಯಕ್ಷ
------------------
ಹಲ್ಮಿಡಿ ಗ್ರಾಮದಲ್ಲಿನ ಕನ್ನಡ ಶಾಸನ ಪ್ರತಿಕೃತಿ ಮಂಟಪದ ಆವರಣದಲ್ಲಿ ಗಿಡಗೆಂಟೆಗಳು ಬೆಳೆದು ಹಾಳುಬಿದ್ದರೆ ಹಾಗೂ ಇದೆ ಹೀಗೆ ಮುಂದುವರಿದರೆ ಇನ್ನಷ್ಟು ದುಸ್ಥಿತಿಗೆ ತಲುಪುತ್ತದೆ. ಪ್ರತಿಕೃತಿ ಮಂಟಪ ಇಲ್ಲವೆಂದಾದರೆ, ಗ್ರಾಮ ಪ್ರವಾಸಿ ಕೇಂದ್ರವಾಗಲೂ ಸಾಧ್ಯವಾಗುವುದಾದರೂ ಹೇಗೆ, ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
ಸೋಮೇಶ್ ಜಯಕರ್ನಾಟಕ ಜಿಲ್ಲಾಧ್ಯಕ್ಷ
----------------------
ಜಯಕರ್ನಾಟಕ ಸಂಘಟನೆಗೆ ನಾನು ತಾಲ್ಲೂಕು ಅಧ್ಯಕ್ಷನಾದ ಅವಧಿಯಲ್ಲಿ ಯಿಂದ ಹಲ್ಮಿಡಿಗೆ ತೆರಳುವಮಾರ್ಗದ ಆರಂಭದಲ್ಲಿ ಸ್ವಾಗತ ಕಮಾನು ನಿರ್ಮಿಸಿಕೊಡಲಾಯಿತು. ಆರಂಭದಲ್ಲಿ ಇದ್ದಂತ ಉತ್ಸಾಹ ಇಂದು ಕಂಡುಬರುತ್ತಿಲ್ಲ. ಶಾಸನದ ಪ್ರತಿಕೃತಿ ಮಂಟಪದ ಸುತ್ತ ಗಿಡಗಳು ಬೆಳೆದು ಪಾಳುಮಂಟಪದಂತೆ ಕಂಡುಬರುತ್ತಿದ್ದು ಪಂಚಾಯಿತಿ ಆಡಳಿತ ಕೂಡಲೆ ಕ್ರಮ ಕೈಗೊಳ್ಳಬೇಕಿದೆ.
-ಅರುಣಕುಮಾರ್, ಜಯಕರ್ನಾಟಕ ತಾ.ಮಾ.ಅಧ್ಯಕ್ಷ