ಹಾಸನ: ಭಾರತ ದೇಶದ ಅತ್ಯುನ್ನತ ಪ್ರಧಾನಿ ಹುದ್ದೆ ಅಲಂಕರಿಸಿ ಏಕೈಕ ಪ್ರಪ್ರಥಮ ಕನ್ನಡಿಗ, ಹಾಗೂ ಪ್ರಧಾನಿಯಾಗಿ 25 ವರ್ಷದ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಭಾರತ ರತ್ನ ಗೌರವ ನೀಡಬೇಕು ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ತಮ್ಮ 6 ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಮಣ್ಣ ಮಕ್ಕಳ ಪರ ದನಿ ಎತ್ತುತ್ತಾ ಸದನಗಳ ಒಳಗೆ ಮತ್ತು ಹೊರತೆ ನಿರಂತರ ಹೋರಾಟ ಮಾಡುತ್ತಾ ಬಂದಿರುವ ದೇವೇಗೌಡರು ಕೇವಲ 11 ತಿಂಗಳ ಪ್ರಧಾನ ಮಂತ್ರಿಯಾಗಿ, 16 ತಿಂಗಳು ಕರ್ನಾಟಕದ ಮುಖ್ಯಮಂತ್ರಿ ಯಾಗಿ ಸ್ವಚ್ಛ ಹಾಗೂ ಮಾದರಿ ಆಡಳಿತ ನೀಡಿದ ಕಳಂಕರಹಿತ ರಾಜಕಾರಣಿ ಎನಿಸಿಕೊಂಡಿದ್ದಾರೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ರೈತರ ರಸಗೊಬ್ಬರದ ಮೇಲಿನ ಸಬ್ಸಿಡಿ ಬಿಡುಗಡೆ ಮಾಡಿ ರೈತರ ನೆರವಿಗೆ ನಿಂತರು. ಅಷ್ಟೇ ಅಲ್ಲ 11 ತಿಂಗಳ ಅವಧಿಯಲ್ಲಿ ನಾಲ್ಕು ಭಾರಿ NDC( ರಾಷ್ಟ್ರೀಯ ಅಭಿವೃದ್ಧಿ ಸಮಿತಿ) ಸಭೆ ನಡೆಸಿ ಆಯಾಯ ರಾಜ್ಯಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಗೈಗೊಂಡರು. ಆಯಾಯ ರಾಜ್ಯಗಳ ವಿದ್ಯುತ್ ಸಮಸ್ಯೆಗಳನ್ನು ಕೇಂದ್ರದ ಅನುಮತಿ ಇಲ್ಲದೆ ಅಲ್ಲಿಯೇ ಉತ್ತಾದಿಸಿ ಬಳಸಿಕೊಳ್ಳಲು ಅನುಮತಿ ನೀಡುವ ಮೂಲಕ ಹಲವು ದಿನಗಳ ಸಮಸ್ಯೆ ನಿವಾರಿಸಿದರು. ಇದು ಯಾವುದೇ ಪ್ರಧಾನಿ ಮಾಡದೇ ಇರುವ ಸಾಧನೆಯಾಗಿದೆ.
ಈಶಾನ್ಯ ರಾಜ್ಯಗಳ ಜ್ವಲಂತೆ ಸಮಸ್ಯೆ, ಕಾಶ್ಮೀರ ಸಮಸ್ಯೆ, ದೆಹಲಿಯಲ್ಲಿ ಮೆಟ್ರೋ ರೈಲ್ವೆ ಯೋಜನೆ, ಪಡಿತರ ವಿತರಣೆ, ಮಹಿಳಾ ಮೀಸಲಾಗತಿ ಸೇರಿದಂತೆ ಹಲವಾರು ಯೋಜನೆ ಜಾರಿಗೆ ತಂದಿದ್ದು ಇದೇ ದೇವೇಗೌಡರು.
16 ತಿಂಗಳು ಮುಖ್ಯಮಂತ್ರಿಯಾಗಿ ಬೆಂಗಳೂರಿಗೆ ಕುಡಿಯಲು ಕಾವೇರಿ ನೀರು , ಬೆಂಗಳೂರು ಸೇರಿ ರಾಜ್ಯದೆಲ್ಲದೆ ಐಟಿ ಪಾರ್ಕ್ ಗಳು, ರಾಜ್ಯದಲ್ಲಿ ಮೊದಲಬಾರಿಗೆ ಪ್ರಪ್ರಥಮವಾಗಿ ಬಡವರಿಗೆ ಪಡಿತರ ಅನ್ನ ಭಾಗ್ಯ ಯೋಜನೆ , ಈದ್ಗಾ ಸಮಸ್ಯೆಗೆ ಪರಿಹಾರ ಕಂಡು ಹಿಡಿದು ಶಾಂತಿ ಸಾಮರಸ್ಯ ನಿರ್ಮಾಣಕ್ಕೆ ನಾಂದಿ ಹಾಡಿದರು.
ಅಧಿಕಾರದ ಉಳಿವಿಗಾಗಿ ತಾವು ನಂಬಿರುವ ತತ್ವ-ಸಿದ್ಧಾಂತಗಳಿಗೆ ಎಂದೂ ತಿಲಾಂಜಲಿ ಹೇಳದೆ ಮೌಲ್ಯಾಧಾರಿತ ರಾಜಕಾರಣ ಮಾಡಿರುವ ದೇವೇಗೌಡರಿಗೆ ಭಾರತ ರತ್ನ ನೀಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಪತ್ರ ಕಳುಹಿಸಿಬೇಕೆಂದು ರಘು ಆಗ್ರಹಿಸಿದ್ದಾರೆ.