ಬೇಲೂರು: ಹಳೇಬೀಡಿನ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಸುಸಜ್ಜಿತವಾದ 108 ವಾಹನ ಮಾದರಿಯಲ್ಲಿ ಆಂಬ್ಯುಲೆನ್ಸ್ ಕೊಡುಗೆ ನೀಡುವುದಾಗಿ ನಾಗೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಿದ್ದೇಶ್‍ನಾಗೇಂದ್ರ ಹೇಳಿದರು.
ಇಲ್ಲಿನ ಸರ್ಕಾರಿ ಆಸ್ಪತ್ರೆಯ 29 ನೌಕರರಿಗೆ ಪ್ರಥಮ ಹಂತವಾಗಿ ಪಡಿತರ ಕಿಟ್ ವಿತರಿಸಿ ಮಾತನಾಡಿ, ಅಂತರಾಷ್ಟ್ರೀಯ ಪ್ರವಾಸಿ ಕೇಂದ್ರವಾದ ಹಳೇಬೀಡು ಆಸ್ಪತ್ರೆಗೆ ಆಂಬ್ಯುಲೆನ್ಸ್ ಇಲ್ಲದಿರುವುದು ಶೋಚನೀಯ. ಇಂದು ಅಲ್ಲಿನ ನೌಕರರಿಗೆ ಪಡಿತರ ಕಿಟ್ ವಿತರಣೆಗೆ ತೆರಳಿದ ಸಂದರ್ಭ ವಿಷಯ ತಿಳಿಯಿತು.ಶೀಘ್ರವೆ ಆಕ್ಸಿಜನ್ ಪ್ಲಾಂಟ್ ಇರುವ ವಾಹನವನ್ನು ನೀಡಲಾಗುವುದು ಎಂದರು.
ಆಸ್ಪತ್ರೆಯ ವೈದ್ಯರು, ದಾದಿಯರು ಎಲ್ಲಾ ಹಂತದ ನೌಕರರು ಕೊರೊನಾ ವಾರಿಯರ್ಸ್ ಆಗಿ ಪ್ರಾಣದ ಹಂಗುತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ಇವರ ನಿಸ್ವಾರ್ಥ ಸೇವೆಯಿಂದ ಹಲವರ ಪ್ರಾಣ ಉಳಿದಿದೆ. ಇಂದು ಮೊದಲ ಹಂತವಾಗಿ ಕೆಲವರಿಗೆ ಪಡಿತರ ಕಿಟ್ ವಿತರಿಸಲಾಗಿದ್ದು ನಂತರ ಉಳಿದ ಎಲ್ಲರಿಗೂ ನೀಡಲಾಗುವುದು.
ಕೊರೊನಾ ಸಂದರ್ಭ ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಸಲಹೆ ನೀಡಿದರು. ವ್ಯಾಕ್ಸಿನ್ ತೆಗೆದುಕೊಳ್ಳುವಲ್ಲಿ ನಿರ್ಲಕ್ಷ್ಯ ಬೇಡ. ತಪ್ಪು ಪ್ರಚಾರಕ್ಕೆ ಕಿವಿಗೊಡಬೇಡಿ, ಆಸ್ಪತ್ರೆಯಲ್ಲಿ ವೈದ್ಯಸಿಬ್ಬಂದಿ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾ.ವೈದ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, 21 ನೇ ತಾರೀಖಿನಿಂದ ಲಸಿಕೆ ಅಭಿಯಾನ ಇಟ್ಟಕೊಂಡಿದ್ದೇವೆ. ಗ್ರಾ.ಪಂ.ವ್ಯಾಪ್ತಿಯಲ್ಲಿನ ಸಿಬ್ಬಂದಿ, ಕಟ್ಟಡ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಮೂರನೇ ಅಲೆ ತಪ್ಪಿಸುವ ದೃಷ್ಟಿಯಿಂದ ಮುಂಜಾಗ್ರತೆ ಕ್ರಮ ಅನಿವಾರ್ಯವಾಗಿದೆ ಎಂದರು.
ಡಾ.ನರಸೇಗೌಡ ಮಾತನಾಡಿ, ಸಿದ್ದೇಶ್ ಅವರ ತಂದೆ ನಾಗೇಂದ್ರ ಅವರು ತಾ.ನ. ಜನತೆಯ ಒಡನಾಟ ಇಟ್ಟುಕೊಂಡಿದ್ದವರು. ತಂದೆ ನಿಧನರಾದ ನಂತರ ಅವರ ಪುತ್ರ ಸಿದ್ದೇಶ್ ಅವರೂ ಸಹ ನೆರವು ನೀಡುವುದನ್ನು ಮುಂದುವರಿಸಿದ್ದಾರೆ.ಕೊರೊನಾ ಪ್ರಥಮ ಅಲೆಯ ವೇಳೆ ಪೂರ್ಣಪ್ರಮಾಣದ ಲಾಕ್‍ಡೌನ್ ಆದ ಸಂದರ್ಭ ಗಂಗೂರಿನ ಶಿವಕುಮಾರ್ ಅವರು ಪ್ರತಿನಿತ್ಯ 150 ರಿಂದ 200 ಜನ ಆರೋಗ್ಯ, ಪೊಲೀಸ್ ಹಾಗೂ ಇನ್ನಿತರ ವಾರಿಯರ್ಸಗೆ ಊಟದ ವ್ಯವಸ್ಥೆ ಮಾಡಿದ್ದನ್ನು ಸ್ಮರಿಸಿಕೊಂಡರಲ್ಲದೆ,ಜನರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದರತ್ತ ಗಮನಹರಿಸಬೇಕೆಂದು ಮನವಿ ಮಾಡಿದರು.
ಪ್ರತಿಷ್ಠಾನದ ಸೇವಾಕಾರ್ಯ ಕುರಿತು ಭುಜೇಂದ್ರ ಅವರು ಮಾಹಿತಿ ಒದಗಿಸಿದರು. ಕೊರೊನಾ ಮುನ್ನೆಚ್ಚರಿಕೆ ಹಾಗೂ ಲಸಿಕೆ ಪಡೆಯುವ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯ್, ಡಾ.ನರಸೇಗೌಡ ಮಾತನಾಡಿದರು. ಆಂಬ್ಯುಲೆನ್ಸ್ ಕೊಡುಗೆಯಾಗಿ ನೀಡುತ್ತಿರುವುದಕ್ಕೆ ಮತ್ತು ಕೊರೊನಾ ಆರಂಭದ ದಿನದಲ್ಲಿ ಗಂಗೂರು ಶಿವಕುಮಾರ್ ಅವರು 150 ಜನರಿಗೆ ಪ್ರತಿನಿತ್ಯ ಊಟದ ವ್ಯವಸ್ಥೆ ಮಾಡಿದ್ದನ್ನು ಸ್ಮರಿಸಿದರು. ಸಿದ್ದೇಶ್ ಅವರು ಆಹಾರದ ಕಿಟ್ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಹಳೇಬೀಡು ಬೇಲೂರು ಪ್ರಾಧಿಕಾರದ ಅಧ್ಯಕ್ಷ ಬಸವರಾಜು, ಗಂಗೂರು ಶಿವಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಪರ್ವತಯ್ಯ, ಸದಸ್ಯರಾದ ಶೇಖರಪ್ಪ, ಲೋಕೇಶ್, ಮಧು ಇತರರು ಇದ್ದರು.