ಮಂಡ್ಯ.ಜೂ 28 ವಿ.ಸಿ ನಾಲೆ ಆಧುನೀಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ರೈತರಿಗೆ ತೊಂದರೆಯಾಗದಂತೆ ರೈತ ಮುಖಂಡರ ಸಲಹೆಗಳನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನಧಾರಿತ ನಾಲೆಯ ಆಧುನೀಕರಣಕ್ಕೆ ಕ್ರಮವಹಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ ನಾರಾಯಣಗೌಡರವರು ಹೇಳಿದರು.
ಜಿ.ಪಂ ಕಾವೇರಿ ಸಭಾಂಗಣದಲ್ಲಿ ನಡೆದ ವಿ.ಸಿ ನಾಲೆ ಆಧುನೀಕರಣ ಕಾಮಗಾರಿ ಪ್ರಾರಂಭಿಸುವ ಬಗ್ಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಾಮಗಾರಿ ಸಂಬಂಧ ರೈತರು ಬೆಳೆಗೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿ ಕಾಮಗಾರಿಯನ್ನು ಪ್ರಾರಂಭಿಸುವ ಸಂಬಂಧ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತೇವೆ ಎಂದರು.
ವಿತರಣಾ ಕಾಲುವೆಗಳ ಅಗಲೀಕರಣದೊಂದಿಗೆ ವಿಸಿ ನಾಲೆಯ ಕಾಮಗಾರಿ ಬಗ್ಗೆ ರೈತರ ಸಲಹೆಗಳನ್ನು ಸ್ವೀಕರಿಸಿದ್ದು, ಮುಂದಿನ ನಿರ್ಧಾರದ ಬಗ್ಗೆ ಮತ್ತೊಂದು ಸಭೆ ನಡೆಸಲಾಗುವುದು ಎಂದರು.
ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಕಾಮಗಾರಿಗಳ ಆಧುನೀಕರಣಕ್ಕೆ ಶ್ರಮಿಸುತ್ತೇನೆ ಎಂದರು.
ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ರೈತಮುಖಂಡರು ಕೋವಿಡ್ ಮಹಾಮಾರಿ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ಬೆಳೆಗೆ ಪೂರೈಸುವ ನೀರನ್ನು ನಿಲ್ಲಿಸಿ ಕಾಮಾಗಾರಿಯನ್ನು ಕೈಗೊಳ್ಳುವುದು ಸರಿಯಲ್ಲ. ನಮ್ಮ ಜಿಲ್ಲೆಯ ಮಣ್ಣು ನೀರನ್ನು ಬಹುಕಾಲದವರೆಗೆ ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿಲ್ಲವಾದುದರಿಂದ ಬಹುವಾರ್ಷಿಕ ಬೆಳೆಗಳಿಗೂ ಕೂಡ ಹಾನಿಯಾಗುತ್ತದೆ ಆದುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಕಾಮಗಾರಿ ವಿಚಾರವನ್ನು ಮುಂದೂಡುವುದು ಸೂಕ್ತ ಎಂದರು.
ಸಭೆಯಲ್ಲಿ ಶಾಸಕರಾದ ಶ್ರೀನಿವಾಸ್, ಡಾ ಕೆ.ಅನ್ನದಾನಿ, ಅಶ್ವಿನ್ ಕುಮಾರ್, ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ ಶ್ರೀಕಂಠೇಗೌಡ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ ಸಿಇಒ ದಿವ್ಯಪ್ರಭು, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಾ.ಅಶ್ವಿನಿ, ಉಪವಿಭಾಗಾಧಿಕಾರಿಗಳಾದ ಶಿವಾನಂದಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತ ಮುಖಂಡರುಗಳು ಹಾಜರಿದ್ದರು.