ಕಾಡುಹಂದಿ ಬೇಟೆ: ಇಬ್ಬರು ಸೆರೆ

ಚನ್ನರಾಯಪಟ್ಟಣ: ಅಕ್ರಮವಾಗಿ ಕಾಡುಹಂದಿ ಶಿಕಾರಿಯಲ್ಲಿ ತೊಡಗಿದ್ದ ಇಬ್ಬರನ್ನು 
ಅರಣ್ಯ ಸಂಚಾರಿ ದಳದ ಪೊಲೀಸರು ಬುಧವಾರ ಮುಂಜಾನೆ ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ರಮೇಶ್ ಮತ್ತು ಕೃಷ್ಣ ಬಂಧಿತ ಆರೋಪಿಗಳು. ಈ ಇಬ್ಬರು ಸೇರಿ ಮೂರು ಕಾಡು ಹಂದಿಗಳನ್ನು ಬೇರೆಲ್ಲೋ ಬೇಟೆಯಾಡಿ, ಅವುಗಳನ್ನು ಕತ್ತರಿಸಿ ಮಾಂಸ ಮಾರಾಟ ಮಾಡಲು ತಾಲೂಕಿನ ಜುಟ್ಟನಹಳ್ಳಿ ಬಾರೆಯ ಬೋರೇಗೌಡನ ಕೊಪ್ಪಲು ಬಳಿ ಹೊಂಚು ಹಾಕುತ್ತಿದ್ದರು.ಖಚಿತ ಮಾಹಿತಿ ಮೇರೆಗೆ ರಾತ್ರಿಗಸ್ತಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಕಲೇಶಪುರ ಅರಣ್ಯ ಸಂಚಾರಿ ದಳದ ಪಿಎಸ್‌ಐ ಶೇಖರಪ್ಪ ಮತ್ತವರ ತಂಡ ಮುಂಜಾನೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳು ಬೇಟೆಯಾಡಿದ್ದ 3 ಹಂದಿ, ಕಡಿಯಲು ತಂದಿದ್ದ ಉಪಕರಣ, ತೂಕದ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ಮಾಂಸ ಮಾರಾಟಕ್ಕಾಗಿ ಕಾಡುಹಂದಿಗಳನ್ನು ಬೇಟೆಯಾಡಿದ್ದಾಗ ಖದೀಮರು ತಪ್ಪೊಪ್ಪಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಮುಖ್ಯ ಪೇದೆಗಳಾದ ಮುಖ್ಯಪೇದೆಗಳಾದ ಅನಂತಗೌಡ, ಮಂಜೇಗೌಡ, ಶಾಂತರಾಜು, ಚಂದ್ರಶೇಖರ್, ರಾಜಶೆಟ್ಟಿ ಭಾಗವಹಿಸಿದ್ದರು.
ಬಂಧಿತ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Post a Comment

Previous Post Next Post