ಹಾಸನ: ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಸರಕಾರಿಕರಣಗೊಳಿಸುವಂತೆ ಆಗ್ರಹಿಸಿ ಭಾರತೀಯ ಪರಿವರ್ತನ ಸಂಘ (ಬಿಪಿಎಸ್) ಕರ್ನಾಟಕ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕೊರೊನಾ ಎಂಬ ವೈರಾಣು ನಮ್ಮನ್ನು ಬಾಧಿಸುತ್ತಿರುವ ಈ ಹೊತ್ತಿನಲ್ಲಿ ನಮ್ಮ ದೇಶದ ಆರೋಗ್ಯ ಕ್ಷೇತ್ರದ ಲೋಪದೋಷಗಳೆಲ್ಲ ಗೋಚರವಾಗುತ್ತಿವೆ. ಹಾಸಿಗೆ ಸಿಗುತ್ತಿಲ್ಲ, ಆಕ್ಸಿಜನ್, ವೆಂಟಿಲೇಟರ್ ಹಾಗೂ ಸೂಕ್ತ ಔಷಧಿಗಳು ಸಿಗುತ್ತಿಲ್ಲ ಎಂಬ ಕೂಗು ಒಂದೆಡೆಯಾದರೆ ಸಾಕಷ್ಟು ಸಂಖ್ಯೆಯಲ್ಲಿ ವೈದ್ಯರು, ದಾದಿಯರು, ವೈದ್ಯಕೀಯ ಪರಿಕರಗಳು ಇಷ್ಟು ದೊಡ್ಡ ದೇಶದಲ್ಲಿ ಎಷ್ಟಿರಬೇಕೋ ಅಷ್ಟು ಸಂಖ್ಯೆಯಲ್ಲಿಲ್ಲ ಎಂಬ ಕೂಗು ಮತ್ತೊಂದೆಡೆ ಕೇಳಿಬರುತ್ತಿದೆ ಎಂದು ದೂರಿದರು. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳು, ಆಂಬುಲೆನ್ಸ್ ಅವರು ಒಂದಕ್ಕೆ ಹತ್ತು ಪಟ್ಟು ಹಣ ಪಡೆಯುತ್ತಿರುವುದು, ಔಷಧಿಗಳು ಪಲ್ಸ್ ಆಕ್ಸಿಮೀಟರ್ ನಂತಹ ಉಪಕರಣಗಳನ್ನು ಐದಾರುಪಟ್ಟು ದರದಲ್ಲಿ ಮಾರುತ್ತಿರುವುದು, ಜೀವರಕ್ಷಕ ಔಷಧಿಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು - ಇಂತಹ ಸಮಸ್ಯೆಗಳು ಸಾಮಾನ್ಯ ಜನರನ್ನು ತುಂಬಾ ಬಾಧಿಸುತ್ತಿವೆ. ಹೆತ್ತವರನ್ನು, ಮಕ್ಕಳನ್ನು ಕಳೆದುಕೊಂಡಿರುವುದು ಒಂದೆಡೆಯಾದರೆ, ಅವರ ಚಿಕಿತ್ಸಾ ವೆಚ್ಚಕ್ಕೆ ಹೆಚ್ಚುಹಣ ತೆರಬೇಕಾದ ಆತಂಕ ಮತ್ತೊಂದೆಡೆ ಆವರಿಸಿದೆ. ದೇಶದಲ್ಲಿ ಇದೊಂದು ಕರಾಳ ಪರಿಸ್ಥಿತಿತಲೆದೂರಿದ್ದು, ಇದಕ್ಕೆಲ್ಲ ಕಾರಣವೇನು? ವೈದ್ಯಕೀಯ ಹಾಗೂ ಶಿಕ್ಷಣದಂತಹ ಮೂಲಭೂತ ಕ್ಷೇತ್ರಗಳನ್ನು ಸರ್ಕಾರ ತನ್ನ ವಶದಲ್ಲಿ ಇಟ್ಟುಕೊಳ್ಳದೆ ಖಾಸಗಿಯವರಿಗೆ ಕೊಟ್ಟಿರುವುದೇ ಆಗಿದೆ. ಪ್ರಜಾಪ್ರಭುತ್ವ ರಾಷ್ಟçದಲ್ಲಿ ಪ್ರಜೆಗಳಿಗೆ ಸೇರಿದ ಸರ್ಕಾರಿ ಆಸ್ಪತ್ರೆಗಳು ಸೌಕರ್ಯಗಳಿಲ್ಲದೆ ಸೊರಗಿಹೋಗಿವೆ. ಖಾಸಗಿ ಆಸ್ಪತ್ರೆಗಳು ಜನರನ್ನು ಹೀರಿ ಕೊಬ್ಬಿ ನಿಂತಿವೆ. ಶಿಕ್ಷಣ ಕ್ಷೇತ್ರ ಕೂಡ ಹೀಗೆಯೇ ಆಗಿದೆ ಎಂದರು. ಇಂದು ಪ್ರತಿ ಭಾರತೀಯ ಪ್ರಜೆ ತನ್ನ ಶಿಕ್ಷಣ ಹಾಗು ಆರೋಗ್ಯಕ್ಕಾಗಿ ತನ್ನ ದುಡಿಮೆಯ ಶೇಕಡಾ ೬೦ ರಷ್ಟು ಹಣವನ್ನು ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು
. ಇವನ್ನೆಲ್ಲಾ ಸರಿಪಡಿಸದೆ ಭಾರತೀಯರಾದ ನಾವು ನೆಮ್ಮದಿಯಿಂದಿರಲು ಸಾಧ್ಯವೇ? ಆದ್ದರಿಂದ ಭಾರತೀಯ ಪರಿವರ್ತನ ಸಂಘವು ಒಂದು ಬೃಹತ್ ಜನಾಂದೋಲನವನ್ನು ಹಮ್ಮಿಕೊಂಡಿದ್ದು, ಭಾರತೀಯರಾದ ನಾವು ಈಗಾಗಲೇ ಸಾಕಷ್ಟು ತೆರಿಗೆಗಳನ್ನು ಕಟ್ಟುತ್ತಿದ್ದೇವೆ. ಇನ್ನೂ ಒಂದು ತೆರಿಗೆಯನ್ನು ಹೆಚ್ಚುವರಿಯಾಗಿ ಕೊಡಲು ಸಿದ್ದರಿದ್ದೇವೆ. ಸರ್ಕಾರ ನಮ್ಮಿಂದ ಆರೋಗ್ಯ ಹಾಗೂ ಶಿಕ್ಷಣಕ್ಕಾಗಿ ಹೆಚ್ಚುವರಿಯಾಗಿ ತೆರಿಗೆಯೊಂದನ್ನು ಕಟ್ಟಿಸಿಕೊಳ್ಳಲಿ. ನಮಗೆ ಏಕರೀತಿಯ, ಗುಣಮಟ್ಟದ ಆರೋಗ್ಯ ಹಾಗು ಶೈಕ್ಷಣಿಕ ಸೌಲಭ್ಯಗಳನ್ನು ನೀಡಬೇಕು ಈ ಹಕ್ಕೊತ್ತಾಯವನ್ನು ಕರ್ನಾಟಕ ರಾಜ್ಯ ಸರ್ಕಾರ ಈ ಕೂಡಲೇ ಪರಿಶೀಲಿಸಿ ಒಪ್ಪಿಕೊಂಡು ಜಾರಿಗೊಳಿಸಬೇಕೆಂದು ವಿನಂತಿಸುತ್ತೇವೆ. ಏನಾದರೂ ಸರ್ಕಾರ ಇದನ್ನು ನಿರ್ಲಕ್ಷಿಸಿದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಇದೆ ವೇಳೆ ಭಾರತೀಯ ಪರಿವರ್ತನ ಸಂಘ (ಬಿಪಿಎಸ್) ಕರ್ನಾಟಕ ಜಿಲ್ಲಾಧ್ಯಕ್ಷ ಸ್ಟೀವನ್ ಪ್ರಕಾಶ್, ಕೃಷ್ಣದಾಸ್ ಇತರರು ಉಪಸ್ಥಿತರಿದ್ದರು.