ಹಾಸನ ಜೂ.೧೬ :- ಅಸಂಘಟಿತ ಕಾರ್ಮಿಕ ವಲಯವು ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರದ ನೆರವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಯವರಾದ ಬಿ.ಕೆ. ರವಿಕಾಂತ್ ಅಭಿಪ್ರಾಯಪಟ್ಟರು.
ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಸನ ಇವರುಗಳ ಸಹಯೋಗದಲ್ಲಿ ಹಾಸನದ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನ ಕಟ್ಟಡ ನಿರ್ಮಾಣದ ಸಂಕೀರ್ಣದಲ್ಲಿ ಅಸಂಘಟಿತ ವಲಸೆ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ನೀಡಲಾಗಿರುವ "ಸುರಕ್ಷಾ ಕಿಟ್" ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ "ಸುರಕ್ಷಾಕಿಟ್"ಗಳನ್ನು ಕಾರ್ಮಿಕರಿಗೆ ವಿತರಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಬಿ.ಕೆ. ರವಿಕಾಂತರವರು ಭಾರತದ ಪ್ರತಿಯೊಬ್ಬ ನಾಗರೀಕರಿಗೂ ಬದುಕುವ ಹಕ್ಕನ್ನು ನೀಡಲಾಗಿದ್ದು, ಪ್ರಾಕೃತಿಕ ವಿಕೋಪಗಳಿಂದ ಅಥವಾ ಮಾನವ ನಿರ್ಮಿತ ವಿಕೋಪಗಳಿಂದ ಬದುಕನ್ನು ಕಳೆದುಕೊಂಡಾಗ ಸರ್ಕಾರವು ಎಲ್ಲರ ಹಿತವನ್ನು ಕಾಯಬೇಕು ಅದನ್ನು ಪಡೆದುಕೊಳ್ಳುವ ಹಕ್ಕು ಅರ್ಹ ಫಲಾನುಭವಿಗಳಿಗಿದೆ ಎಂದರು.
ಆ ನಿಟ್ಟಿನಲ್ಲಿ ಸರಕಾರದವತಿಯಿಂದ ಕಾರ್ಮಿಕ ಇಲಾಖೆ ಮೂಲಕ ಸುರಕ್ಷಾ ಕಿಟ್ ಗಳನ್ನು ಕಾರ್ಮಿಕರಿಗೆ ತಲುಪಿಸಲು ನೀಡಲಾಗಿದೆ. ಸುರಕ್ಷಾ ಕಿಟ್‌ಗಳು ಕೋವಿಡ್- ೧೯ರ ವಿರುದ್ಧ ಹೋರಾಡಲು ಅಗತ್ಯವಿರುವ ಸ್ವಚ್ಛತೆ ಪಾಲಿಸಲು ಅವಶ್ಯವಿರುವ ಸ್ಯಾನಿಟೈಸರ್, ಹ್ಯಾಂಡ್ ವಾಷ್, ಮಾಸ್ಕ್ ಗಳು, ಸಾಬೂನುಗಳನ್ನು ಒಳಗೊಂಡಿದ್ದು ಮಹಿಳಾ ಕಾರ್ಮಿಕರಿಗೆ ಇವೆಲ್ಲದರ ಜೊತೆಗೆ ಅವಶ್ಯವಿರುವ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಆಹಾರ ಸಾಮಗ್ರಿಗಳನ್ನು ಒಳಗೊಂಡ ಆಹಾರ ಕಿಟ್‌ಗಳನ್ನು ವಿತರಿಸಲಾಗುವುದು ಎಂದರು.
ಕಾರ್ಮಿಕರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಂಡಿದ್ದಲ್ಲಿ ಸರಕಾರದ ಯೋಜನೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ನೋಂದಣಿಯಾಗದ ಕಾರ್ಮಿಕರನ್ನು ಗುರುತಿಸಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕೆಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರ್ಮಿಕ ಉಪ ಆಯುಕ್ತರಾದ ಸೋಮಣ್ಣರವರು ಮಾತನಾಡಿ ಸರಕಾರದ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿದ್ದು ಅವುಗಳನ್ನು ಪಡೆಯಲು ಕಡ್ಡಾಯವಾಗಿ ನೋಂದಣಿಯಾಗಿರಬೇಕು, ಬ್ಯಾಂಕ್ ಖಾತೆ ಒಳಗೊಂಡಿರಬೇಕು ಇದರಿಂದ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಹಲವಾರು ಉಪಯೋಗಗಳಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಅಧಿಕಾರಿ ರಾಮಕೃಷ್ಣ, ಕಾರ್ಮಿಕ ನಿರೀಕ್ಷಕರಾದ ಆನಂದರಾಮ್, ಕಟ್ಟಡ ನಿರ್ಮಾಣ ವ್ಯವಸ್ಥಾಪಕರಾದ ಹನುಮಂತರಾಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
