ಹಾಸನ: ಜೆ.ಡಿ.ಎಸ್ ಪಕ್ಷದ ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣನವರು ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷವು ಜೆ.ಡಿ.ಎಸ್ ಬಗ್ಗೆ ಬಿ.ಜೆ.ಪಿ, ``ಬಿ ಟೀಮ್'' ಎಂದು ಹೇಳಿದ್ದರಿಂದ ಬಿ.ಜೆ.ಪಿ.ಗೆ ಅನುಕೂಲವಾಯಿತು ಎಂದು ಟೀಕೆ ಮಾಡಿದ್ದಾರೆ.ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಮತ್ತು ವಕೀಲರ ಸಂಘದ ಮಾಜಿ ಅಧ್ಯಕ್ಷ ದೇವರಾಜೇಗೌಡ ಆಕ್ರೋಶವ್ಯಕ್ತಪಡಿಸಿ ಸ್ಪಷ್ಟನೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರದಂದು ಮಾತನಾಡುತ್ತಾ, ಶಾಸಕರಾದ ಹೆಚ್.ಡಿ. ರೇವಣ್ಣನವರಿಗೆ ಒಂದು ಪ್ರಶ್ನೆ ಯಾವ ವಿಚಾರವಾಗಿ ಬಿ.ಜೆ.ಪಿ.ಯ `` ಬಿ ಟೀಮ್ " ಅಲ್ಲ ಎಂಬುದನ್ನು ಸಾಬೀತು ಮಾಡುತ್ತೀರಿ? ಪ್ರಾರಂಭದಿAದಲೂ ಕೂಡ ಇಡೀ ನಿಮ್ಮ ಕುಟುಂಬ ಬಿ.ಜೆ.ಪಿ.ಯ ಪರವಾಗಿ ಹೇಳಿಕೆ ನೀಡುತ್ತಿದೆ. ಮುಖ್ಯಮಂತ್ರಿಗಳು ಹಾಸನಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿಯೂ ಕೂಡ ನಿಮ್ಮ ಪಕ್ಷದ ವರಿಷ್ಠರು ಹೇಳಿದ ಗುತ್ತಿಗೆದಾರರಿಗೆ ವಿಮಾನ ನಿಲ್ದಾಣದ ಕಾಮಗಾರಿ ನೀಡುತ್ತೇನೆಂದು ಯಾವ ಹಿನ್ನಲೆಯಲ್ಲಿ ಕೇಳಿದ್ದಾರೆ ಜನತೆಗೆ ಉತ್ತರಿಸುತ್ತೀರ? ನೀವೇ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಕಾಲಕ್ಕೆ ಏಕೆ ವಿಮಾನ ನಿಲ್ದಾಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ನಮ್ಮ ಪಕ್ಷದ ಮುಖಂಡರ ವಿಚಾರವಾಗಿ ಯಾವ ನೈತಿಕತೆಯಿಂದ ಮಾತನಾಡುತ್ತೀರಿ, ಈಗ ನಮ್ಮ ಪಕ್ಷದ ಮುಖಂಡರಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೈಬಿಟ್ಟರೆ ಕಾಂಗ್ರೆಸ್ ನಿರ್ನಾಮ ಎಂದು ಹೇಳಿದ್ದೀರಿ, ಈಗ ನಿಮಗೆ ಸಿದ್ದರಾಮಯ್ಯನವರ ಬಗ್ಗೆ ಜ್ಞಾನೋದಯವಾಗಿ, ಸಿದ್ದರಾಮಯ್ಯನವರು ನಿಮ್ಮ ಪಕ್ಷದಲ್ಲಿ ಇದ್ದಾಗ ಅವರ ಶಕ್ತಿಯ ಬಗ್ಗೆ ನಿಮಗೆ ಅರಿವಾಗಲಿಲ್ಲವೇ? ಕೊಡಬಾರದ ಕಷ್ಟ ಕೊಟ್ಟು ಪಕ್ಷ ಬಿಡುವ ರೀತಿಯಲ್ಲಿ ನಡೆದುಕೊಂಡಿದ್ದೀರಿ, ಈಗ ಅವರ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡುತ್ತೀರಿ , ಯಾವ ಉದ್ದೇಶಕ್ಕಾಗಿ ಮಾತನಾಡುತ್ತೀರಿ ಎಂದರು.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಮತ್ತು ಕೆ.ಪಿ.ಸಿ.ಸಿ. ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ರವರು ಒಟ್ಟಾಗಿ ಪಕ್ಷದ ಬಲವರ್ಧನೆಗೆ ಹೋರಾಟ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಗೆ ಮಾಜಿ ಸಂಸದ ಧ್ರುವ ನಾರಾಯಣ್ ಮತ್ತು ಸಂಸದ ಡಿ.ಕೆ. ಸುರೇಶ್‌ರವರನ್ನು ಜಿಲ್ಲಾ ಉಸ್ತುವಾರಿಯಾಗಿ ಪಕ್ಷವು ನೇಮಕ ಮಾಡಿದೆ. ಇವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ನಡೆಯುತ್ತಿದೆ. ನಿಮಗೆ ಯಾರು ನಿಮ್ಮ ಪಕ್ಷದ ಸಂಘಟನೆ ಮಾಡದಂತೆ ತಡೆದಿರುವುದಿಲ್ಲ. ಇಂತಹ ಬೇಜವಬ್ಧಾರಿ ಹೇಳಿಕೆಯನ್ನು ಮುಂದುವರೆದರೆ ನಿಮ್ಮ ಪಕ್ಷದ ಉಳುಕುಗಳನ್ನು ನಾವುಗಳು ಎತ್ತಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಬೆಲೆ ಏರಿಕೆ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕೂಡ ಪ್ರತಿಭಟನೆ ಮಾಡುವ ಮೂಲಕ ಸಾಮಾನ್ಯ ಜನತೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಹೋರಾಡುತ್ತಿದೆ. ಆದರೆ ನಿಮ್ಮ ಪಕ್ಷ ಏನು ಮಾಡದೇ ಮೌನವಾಗಿರುವುದೇಕೆ? ಜನತೆ ಪರ ಎಂದು ಕೇವಲ ಬಾಯಿ ಮಾತಿನ ಹೇಳಿಕೆ ನೀಡಿದರೆ ಆಗುತ್ತದೆಯೇ? ಮೊದಲು ಜನತೆಗೆ ಉತ್ತರಿಸಿ. ಕೋವಿಡ್ ಸಂದರ್ಭದಲ್ಲಿ ಜನತೆಗೆ ನಿಮ್ಮ ಪಕ್ಷದ ವತಿಯಿಂದ ಕಿಂಚಿತ್ತು ಉಪಯೋಗ ಆಗುತ್ತಿಲ್ಲ. ಪೆಟ್ರೋಲ್, ಡಿಸೇಲ್, ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕೂಡ ಮಾತನಾಡಿಲ್ಲ, ಹಾಸನ ಕ್ಷೇತ್ರದ ಶಾಸಕರು ಕೂಡ ಈ ನಿಟ್ಟಿನಲ್ಲಿ ಬಾಯಿ ಬಿಡುತ್ತಿಲ್ಲ. ಎರಡು ಪಕ್ಷಗಳ ನಡವಳಿಕೆಗಳನ್ನು ಸಾಮಾನ್ಯ ಜನತೆ ಪ್ರತಿನಿತ್ಯ ಗಮನಿಸುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ನಿಮಗೆ ಜಿಲ್ಲೆಯ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪುಟ್ಟಸ್ವಾಮಿ, ಕುಮಾರಸ್ವಾಮಿ, ಶಂಭೇಗೌಡ ಇತರರು ಉಪಸ್ಥಿತರಿದ್ದರು.