ಹಾಸನ: ಕೊರೋನಾ ಎದುರಿಸಲು ಸಿದ್ಧರಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಲಸಿಕೆಯನ್ನು ಹಾಕಿಸಿಕೊಳ್ಳುವುದರ ಮೂಲಕ ಉತ್ತಮ ಸಮಾಜ ನಿರ್ಮಿಸೋಣ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಕರೆ ಕೊಟ್ಟರು.
ನಗರದ ನರ್ಸಿಂಗ್ ಕಾಲೇಜುನಲ್ಲಿ ಸೋಮವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ೧೮ ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಹಾಕುವ ಕಾರ್ಯಕ್ರವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸೂಚನೆಯಂತೆ ಅಧ್ಯಾಯನದ ರೂಪದಲ್ಲಿ ಸೋಮವಾರದಿಂದ ಲಸಿಕೆ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರಾರಂಭದಲ್ಲಿ ಜನರೊಳಗೆ ಲಸಿಕೆ ಪಡೆಯಬೇಕೊ ಬೇಡವೊ ಎನ್ನುವ ಮನೋಭಾವ ಇತ್ತು. ಈಗ ಮನವರಿಕೆಯಾಗಿ ಸ್ವಯಂ ಪ್ರೇರಿತವಾಗಿ ಲಸಿಕೆ ಪಡೆಯುತ್ತಿದ್ದು, ಲಸಿಕೆ ತೆಗೆದುಕೊಳ್ಳುವುದರಿಂದ ಯಾವ ತೊಂದರೆ ಇಲ್ಲ. ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈಗ ರಾಜ್ಯದಲ್ಲಿ ನಾಲ್ಕುವರೆ ಲಕ್ಷ ಜನರಿಗೆ ಲಸಿಕೆ ಕೊಡಲಾಗಿದ್ದು, ಒಂದು ಲಕ್ಷ ಜನರಿಗೆ ಎರಡು ಡೋಸ್ ಲಸಿಕೆಯನ್ನು ಕೂಡ ಕೊಡಲಾಗಿದೆ. ಇಂದಿನಿAದ ಎಲ್ಲಾ ಗ್ರಾಮಗಳಲ್ಲಿ ಲಸಿಕೆ ಕೊಡುವ ಬೂತ್ ಗಳನ್ನು ನಿರ್ಮಿಸಲಾಗಿದೆ. ಎಲ್ಲರಿಗೂ ಲಸಿಕೆ ಉಚಿತವಾಗಿ ಕೊಡಲಾಗುತ್ತಿದೆ. ೧೮ ವರ್ಷ ಮೇಲ್ಪಟ್ಟವರಿಗೆ ಮತ್ತು ೪೫ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡಲಾಗುತ್ತಿದೆ. ಲಸಿಕೆ ಸರಬರಾಜಿನಲ್ಲೂ ಕೂಡ ಈಗ ಸುಧಾರಣೆಯಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯಕರ‍್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್ ಮಾತನಾಡಿ, ಎರಡನೇ ಅಲೆ ಪ್ರಾರಂಭದಲ್ಲಿ ಲಸಿಕೆ ಕೊಡಲು ಹೋದಾಗ ಜನರು ಹಿಂಜರಿಯುತ್ತಿದ್ದರು. ಈಗ ಸ್ವಯಂ ಪ್ರೇರಿತವಾಗಿ ಲಸಿಕೆಯನು ಸಾರ್ವಜನಿಕರು ಹಾಕಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ಮೂರನೇ ಅಲೆಯನು ಎದುರಿಸಲು ಸಿದ್ಧರಾಗಬೇಕು ಎಂದು ಕಿವಿಮಾತು ಹೇಳಿದರು. ಖಾಸಗಿ ಆಸ್ಪತ್ರೆಯಲ್ಲಿ ೪೦೦ ರಿಂದ ೫೦೦ ರೂಗಳಿಗೆ ಲಸಿಕೆ ಲಭ್ಯವಾಗುತ್ತಿದ್ದು, ಸರಕಾರದಿಂದಲೂ ಉಚಿತ ಲಸಿಕೆ ಕೊಡಲಾಗುತ್ತಿದೆ ಎಂದು ಸಲಹೆ ನೀಡಿದರು. ಈಗಲೇ ತಯರಾಗದಿದ್ದರೇ ಮೂರನೇ ಅಲೆಯಲ್ಲಿ ಯಾವ ದೇವರು ಕೂಡ ಕಾಪಾಡುವುದಿಲ್ಲ ಎಂದು ಎಚ್ಚರಿಸಿದರು. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡು ಆರೋಗ್ಯ ಸಮಾಜ ನಿರ್ಮಿಸೋಣ ಎಂದು ಕರೆ ಕೊಟ್ಟರು.
ಇದೆ ವೇಳೆ ಮೆಡಿಕಲ್ ಕಾಲೇಜ್ ನಿರ್ದೇಶಕ ಬಿ.ಸಿ. ರವಿಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್, ಜಿಲ್ಲಾ ಸರ್ಜನ್ ಕೃಷ್ಣಮೂರ್ತಿ, ಆರ್.ಸಿ.ಹೆಚ್. ಅಧಿಕಾರಿ ಕಾಂತರಾಜು, ಆರೋಗ್ಯಾಧಿಕಾರಿ ಮಂಜೂಳಾ, ಅರುಂಧತಿ ಇತರರು ಉಪಸ್ಥಿತರಿದ್ದರು.