ಹಾಸನ ಜೂನ್ ೧೦:-ಸಾಂಕ್ರಾಮಿಕ ರೋಗಗಳ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದ್ದು ಶೂನ್ಯ ಮಲೇರಿಯಾ ಗುರಿಯನ್ನು ತಲುಪೋಣ ಎಂಬ ಘೋಷ ವಾಕ್ಯದಂತೆ ಹಾಸನ ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಹೇಶ್ ಅವರು ತಿಳಿಸಿದ್ದಾರೆ.
ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಅವರು ಇಂದು ಆನ್ ಲೈನ್ ಮೂಲಕ ಅಂತರ ಇಲಾಖೆ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿ ಮಾತನಾಡಿದರು. ಸಾಂಕ್ರಾಮಿಕ ರೋಗಗಳಲ್ಲೊಂದಾದ ಒಂದಾದ ಮಲೇರಿಯಾ ನಿರ್ಮೂಲನೆಗೆ ವಿವಿಧ ಇಲಾಖೆಗಳ ಸಹಕಾರ ಅತ್ಯಗತ್ಯವಿದ್ದು ಸೊಳ್ಳೆಯ ಬೆಳವಣಿಗೆಯನ್ನು ನಿಯಂತ್ರಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿರ್ಮಾಣಹಂತದಲ್ಲಿರುವ ಕಟ್ಟಡಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ನಿಗಾವಹಿಸುವುದರ ಜೊತೆಗೆ ಕಟ್ಟಡ ಕಾರ್ಮಿಕರು ಮಲೇರಿಯಾ ಇರುವಂತಹ ಪ್ರದೇಶಗಳಿಂದ ಬಂದಿದ್ದಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ರಕ್ತಪರೀಕ್ಷೆ ಮಾಡಿಸಬೇಕು ಎಂದರು. ರಸ್ತೆ ಮತ್ತು ಚರಂಡಿಗಳಲ್ಲಿ ನೀರು ನಿಲ್ಲದೆ ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು ಎಂದರು.
ಮಳೆಗಾಲದಲ್ಲಿ ತೆಂಗಿನಕಾಯಿ ಕೋರಟ, ಹಳೆಯ ಟೈಯರ್ ಮತ್ತಿತರ ಅನುಪಯುಕ್ತ ಸಾಮಗ್ರಿಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು, ಎಲ್ಲೆಂದರಲ್ಲಿ ಬಿಸಾಡುವುದರಿಂದ ಅವುಗಳಲ್ಲಿ ಮಳೆ ನೀರು ಶೇಖರಣೆಯಾಗಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತದೆ ಎಂದರಲ್ಲದೇ ಮನೆಯ ಸುತ್ತಮುತ್ತ ಸ್ವಚ್ಛವಾಗಿಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಬಿಹಾರ, ಅಸ್ಸಾಂ, ಕೇರಳ ರಾಜ್ಯಗಳಿಂದ ಕೆಲಸಕ್ಕಾಗಿ ವಲಸೆ ಬರುವ ಕಾರ್ಮಿಕರನ್ನು ಗುರುತಿಸಿ ಅವರ ರಕ್ತಪರೀಕ್ಷೆ ಮಾಡಿಸಲು ಕಾರ್ಮಿಕ ಇಲಾಖೆಯ ವತಿಯಿಂದ ಕ್ರಮವಹಿಸಬೇಕು ಎಂದು ಹೇಳಿದರು.
ಶಿಕ್ಷಣ ಇಲಾಖೆಯು ಆನ್‌ಲೈನ್ ಮೂಲಕ ಮಕ್ಕಳಿಗೆ ತರಗತಿ ನಡೆಸುತ್ತಿರುವ ಸಂಧರ್ಭದಲ್ಲಿ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕು ಎಂದ ಅವರು ಅಂಗನವಾಡಿ, ವಸತಿ ಶಾಲೆ ಮತ್ತು ನಿಲಯ ಗಳಲ್ಲಿಯೂ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು.
ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಬೆಳೆಯುವುದರಿಂದ ಸಂತಾನೋತ್ಪತ್ತಿ ನಿಯಂತ್ರಿಸಲು ಲಾರ್ವಾಹಾರಿ ಮೀನುಗಳಾದ ಗಪ್ಪಿ ಮತ್ತು ಗ್ಯಾಂಬೋಸಿಯ ಮೀನುಗಳನ್ನು ಕೆರೆ, ಕಟ್ಟೆ, ಹೊಂಡಗಳಲ್ಲಿ ಬಿಡಲು ಮೀನುಗಾರಿಕೆ ಇಲಾಖೆಯ ಒದಗಿಸುತ್ತಿದ್ದು, ಅನುದಾನ ಅಗತ್ಯವಿದ್ದಲ್ಲಿ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಲ್ಲಿ ರಕ್ತ ಪರೀಕ್ಷಿಸಿದಾಗ ಮಲೇರಿಯಾ ಪ್ರಕರಣ ಕಂಡುಬAದಲ್ಲಿ ಆ ವ್ಯಕ್ತಿಗಳ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡುವಂತೆ ಹೇಳಿದರು.
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಹಿರಣ್ಣಯ್ಯ, ಕೀಟ ತಜ್ಞರಾದ ರಾಜೇಶ್ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪ್ರಕಾಶ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ದಿಲೀಪ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
