ಹಾಸನ ಜೂ. ೧೦ :- ಕೋವಿಡ್ - ೧೯ ಮೂರನೇ ಅಲೆಗೆ ಬೇಕಾಗುವಂತಹ ಪೂರ್ವ ಸಿದ್ಧತೆಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕೋವಿಡ್ ೧೯ ಹಾಗೂ ಇನ್ನಿತರೆ ಅಭಿವೃದ್ದಿ ವಿಷಯಗಳ ಕುರಿತು ಸಭೆ ನಡೆಸಿ ಮಾತನಾಡಿದ ಅವರು ಕೋವಿಡ್ -೧೯ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಎಚ್ಚರಿಕೆ ನೀಡಲಾಗಿದೆ ಹಾಗಾಗಿ ಸುಸಜ್ಜಿತ ಮಕ್ಕಳ ಚಿಕಿತ್ಸಾ ಘಟಕವನ್ನು ಹಿಮ್ಸ್ ನಲ್ಲಿ ಪ್ರಾರಂಭಿಸಬೇಕು. ಮಕ್ಕಳ ಜೊತೆ ತಂದೆ ತಾಯಿಗಳು ಉಳಿದುಕೊಳ್ಳುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಹಾಗೂ ಅದಕ್ಕೆ ಬೇಕಾಗುವ ವಾರ್ಡ್ಗಳು, ಬೆಡ್, ವೆಂಟಿಲೇಟರ್, ಆಕ್ಸಿಜನ್ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ೨ ತಿಂಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿ ಅವರು ಮಾತನಾಡಿ ಆನೆ ದಾಳಿಗೆ ೭ ಜನರು ಮರಣ ಹೊಂದಿದ್ದು, ೪ ಆನೆಗಳು ಮರಣ ಹೊಂದಿವೆ ಹಾಗೂ ಆನೆ ಕಾರಿಡಾರ್ ಮತ್ತು ಶಾಶ್ವತ ಪರಿಹಾರಕ್ಕೆ ಜನರು ಬೇಡಿಕೆಯನ್ನು ಇಟ್ಟಿದ್ದಾರೆ. ಹಾಗೂ ೪೫ ಕಿ.ಮೀ ಶಾಶ್ವತ ಬ್ಯಾರಿಕೆಡ್ ನಿರ್ಮಾಣ ಕೈಗೊಳ್ಳಲಾಗುವುದು ಎಂದು ಸಚಿವರ ಗಮನಕ್ಕೆ ತಂದರು.
ಹಿಮ್ಸ್ ನಿರ್ದೇಶಕರಾದ ರವಿಕುಮಾರ್ ಮಾತನಾಡಿ ಕೋರೋನಾ ಸೋಂಕಿತರು ಹೆಚ್ಚಾದಲ್ಲಿ ಹೆಚ್ಚಿನ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಮರಣ ಪ್ರಮಾಣವು ಇಳಿಮುಖವಾಗುತ್ತಿದೆ ಹಾಗೂ ೩ನೇ ಅಲೆಗೆ ಸಂಬAಧಿಸಿದAತೆ ತಂಡ ರಚಿಸಿ ಸಭೆ ನಡೆಸಲಾಗಿದ್ದು, ಬೇಕಾಗುವ ಆಕ್ಸಿಜನ್ ಕಾಸಂಟ್ರೇಟರ್ ಗಳು, ವೆಂಟಿಲೇಟರ್, ಐಸಿಯು ಹಾಗೂ ಬೆಡ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದರ ಜೊತೆಗೆ ಬೇಕಾಗುವ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಹಾಗೂ ಯುನೈಟೆಡ್ ಸಂಸ್ಥೆ ಸಹಕಾರದಿಂದ ೭೫ ಬೆಡ್ ಗಳ ಮಕ್ಕಳ ಐಸಿಯು ವಾರ್ಡ್ಗಳ ವ್ಯವಸ್ಥೆ ಮಾಡಿಕೊಡಲಾಗುವುದು ಇದಕ್ಕೆ ಪ್ರತಿಕ್ರಿಸಿದ ಸಚಿವರು ಇನ್ನೂ ೩೦೦ ಬೆಡ್‌ಗಳನ್ನು ವಿಸ್ತರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ರವಿ ಅವರು ಮಾತನಾಡಿ ಈ ಬಾರಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಪ್ರಮುಖವಾಗಿ ಕೃಷಿ ಯಂತ್ರೋಪಕರಣಗಳು, ಲಘು ನೀರಾವರಿಗೆ ತೊಂದರೆಯಾಗುತ್ತಿದ್ದು, ಕಳೆದ ಸಾರಿ ಸಬ್ಸಿಡಿಯಂತೆ ಈ ಬಾರಿಯೂ ಸಬ್ಸಿಡಿ ನೀಡಿದರೆ ರೈತರಿಗೆ ಸಹಾಯವಾಗುತ್ತದೆ ಎಂದು ಸಚಿವರ ಗಮನಕ್ಕೆ ತಂದರು.
ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಯೋಗೇಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ಆಲೂಗಡ್ಡೆ ಬಿತ್ತನೆಯು ಪ್ರಾರಂಭವಾಗಿದ್ದು ಮಳೆಯ ಅಭಾವದಿಂದಾಗಿ ಸ್ವಲ್ಪ ಪ್ರಮಾಣದಲ್ಲಿ ಪರಿಣಾಮ ಬೀರಬಹುದು ಎಂದು ಮಾಹಿತಿ ನೀಡಿದರು.
ಕಾವೇರಿ ನೀರಾವರಿ ನಿಗಮದಿಂದ ಸಕಲೇಶಪುರದಲ್ಲಿ ಪಟ್ಟಣಕ್ಕೆ ಹೊಂದಿಕೊAಡAತೆ ಒಂದೂವರೆ ಕಿ.ಮೀ ಉದ್ದದ ೧೦ ಅಡಿ ಎತ್ತರದ ತಡೆಗೋಡೆ ನಿರ್ಮಾಣದ ಕಾರ್ಯ ತ್ವರಿತವಾಗಿ ಕೈಗೊಳ್ಳಲಾಗುತ್ತಿರುವುದರ ಬಗ್ಗೆ ಚರ್ಚಿಸಿದರು.
ಎತ್ತಿನ ಹೊಳೆ ಯೋಜನೆಯು ಮುಕ್ತಾಯ ಹಂತದಲ್ಲಿದು, ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಹೊತ್ತಿಗೆ ಮುಕ್ತಾಯವಾಗಲಿರುವ ಮಾಹಿತಿ ಪಡೆದ ಅವರು ನೀರನ್ನು ಎತ್ತಲು ಪ್ರಾಯೋಗಿಕವಾಗಿ ಚಾಲನೆ ನೀಡಲು ಬೇಗ ಮುಕ್ತಾಯ ಮಾಡುವಂತೆ ಅಧಿಕಾರಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯಾನಿರ್ವಾಣಾಧಿಕಾರಿ ಬಿ.ಎ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತಾರಾಜಾಂ, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
