ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್.ಆರ್ ಪುರ ತಾಲ್ಲೂಕುಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಮೂಡಿಗೆರೆ ತಾಲ್ಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಬೀಸುವ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ತಾಲ್ಲೂಕಿನ ಮುಗ್ರಹಳ್ಳಿ ಸೇತುವೆ ಮುಳುಗಡೆ ಹಂತ ತಲುಪಿದೆ. ಗಾಳಿಯ ಹೊಡೆತಕ್ಕೆ ಮರಗಳು ಉರುಳಿದ್ದು ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಜನರು ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಪರದಾಡುತ್ತಿದ್ದಾರೆ.
ಮಲೆನಾಡನ್ನು ನಲುಗಿಸಿರುವ ಮಳೆಯ ರುದ್ರ ನರ್ತನಕ್ಕೆ, ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ, ಕಳಸ ತಾಲ್ಲೂಕಿನ ಹೆಬ್ಬಾಳ ಸೇತುವೆ ಮುಳುಗಲು ಕೊಂಚ ಬಾಕಿಯಿದೆ. ಕುದುರೆಮುಖ ಸುತ್ತ ಮುತ್ತ ಬಿಟ್ಟೂ- ಬಿಡದೆ ಸುರಿಯುತ್ತಿರುವ ಮಳೆಯಿಂದ ಹಗಲಿನಲ್ಲೇ ಮುಸ್ಸಂಜೆ ವಾತಾವರಣವುಂಟಾಗಿದೆ. ಭಾರೀ ಮಳೆ ಹಿನ್ನಲೆಯಲ್ಲಿ ಭದ್ರಾ ಮೈದುಂಬಿ ಹರಿಯುತ್ತಿದ್ದಾಳೆ.
ಮೂಡಿಗೆರೆ ತಾಲ್ಲೂಕಿನಾದ್ಯಂತ ಮಳೆಯ ಆರ್ಭಟ ಜೋರಾಗುತ್ತಿದ್ದು, ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಗಾಳಿ - ಮಳೆಯ ತೀವ್ರತೆ ಹೆಚ್ಚಿದೆ.
ನಿಡುವಾಳೆ ಆಸ್ಪತ್ರೆ ಮುಂಭಾಗ ಬೃಹತ್ ಗಾತ್ರದ ಮರ ನೆಲಕ್ಕುರುಳಿದೆ. ಈ ಗಾಳಿ - ಮಳೆಯಲ್ಲಿ ಬಿದರಹಳ್ಳಿಯಲ್ಲಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿಯೂ ಸಂಭವಿಸಿದೆ. ಇದರಿಂದ ಯಾವುದೇ ಸಾವು - ನೋವುಗಳ ಸುದ್ದಿ ತಿಳಿದು ಬಂದಿಲ್ಲ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇದೆ.
Tags
ಚಿಕ್ಕಮಗಳೂರು