ಕೊಣನೂರು : ಇಲ್ಲಿನ ಗ್ರಾ.ಪಂ ಆವರಣದಲ್ಲಿ ಪಂಚಾಯತಿಯ ಸಿಬ್ಬಂದಿಗಳಿಗೆ ಸ್ಟೀಮರ್, ಸ್ಯಾನಿಟೈಸರ್, ಮಾಸ್ಕ್, ಫೇಸ್‌ಶೀಲ್ಡ್, ಇಮ್ಯುನಿಟಿ ಬೂಸ್ಟರ್ ಹಾಗೂ ಪುರುಷ ಸಿಬ್ಬಂದಿಗಳಿಗೆ ಬನಿಯನ್ಸ್ಗಳನ್ನು ಇಲ್ಲಿನ ಉಷಾ ಕ್ಲಿನಿಕ್ ಹಾಗೂ ಅನಿಲ್ ಮೆಡಿಕಲ್ಸ್ನ ಡಾ. ಉಷಾ ಹಾಗೂ ಅನಿಲ್ ವಿತರಿಸಿದರು.
ಈ ಸಂದರ್ಭದಲ್ಲಿ ಡಾ. ಉಷಾ ಮಾತನಾಡಿ ಸಮಾಜ ಆರೋಗ್ಯವಾಗಿರಬೇಕಾದರೆ ಸ್ವಚ್ಚತೆ ಬಹಳ ಮುಖ್ಯ. ಎಲ್ಲರೂ ಸಹ ತಮ್ಮ ವೈಯಕ್ತಿಕ ಸ್ವಚ್ಚತೆಯ ಜೊತೆಗೆ ಪರಿಸರದ ಸ್ವಚ್ಚತೆಯ ಬಗ್ಗೆಯೂ ಗಮನ ನೀಡಬೇಕು. ಗ್ರಾಮಗಳ ಸ್ವಚ್ಚತೆಯಲ್ಲಿ ಪೌರಕಾರ್ಮಿಕರ ಪಾತ್ರ ಮುಖ್ಯ. ಅವರಿಲ್ಲದೇ ಇದ್ದರೆ ಗ್ರಾಮಗಳ ಸ್ವಚ್ಚತೆಯನ್ನು ಊಹಿಸಿಕೊಳ್ಳಲೂ ಅಸಾಧ್ಯ. ಇಲ್ಲಿನ ಪೌರಕಾರ್ಮಿಕರು ಬಹಳ ಶ್ರಮದಿಂದ ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಪ್ರತೀ ನಿತ್ಯ ಗ್ರಾಮಗಳ ಸ್ವಚ್ಚತೆಯ ಬಗ್ಗೆ ಮುತುವರ್ಜಿ ವಹಿಸುತ್ತಿದ್ದು ಸಾರ್ವಜನಿಕರು ಸ್ವಚ್ಚತೆಗೆ ಅವರನ್ನೇ ಕಾಯದೇ ನೀವೂ ಸಹ ಅಲ್ಪ ಮಟ್ಟದಲ್ಲಿ ಸ್ವಚ್ಚತೆಯ ಬಗ್ಗೆ ಗಮನ ನೀಡಿ ಎಂದರು.
ಹೋಬಳಿಯ ನೋಡಲ್ ಅಧಿಕಾರಿ ರಾಜೇಶ್ ಮಾತನಾಡಿ ದಾನಿಗಳು ಕೊಡುವ ವಸ್ತುವಿನ ಬೆಲೆ ಎಷ್ಟೇ ಇರಬಹುದು ಆದರೆ ಕಷ್ಟ ಕಾಲದಲ್ಲಿ ಕೊಡುವ ಆ ವಸ್ತುವಿಗೆ ಬೆಲೆ ಕಟ್ಟಲಾಗುವುದಿಲ್ಲ. ಹೀಗೆ ಕೊಟ್ಟಂತಹ ವಸ್ತುವು ಕೋಟಿಗೆ ಸಮಾನ. ಅಂತಹ ಪುಣ್ಯದ ಕೆಲಸವನ್ನು ಇಂದು ಉಷಾ ಕ್ಲಿನಿಕ್ ಹಾಗೂ ಅನಿಲ್ ಮೆಡಿಕಲ್ಸ್ನ ಉಷಾ ಹಾಗೂ ಅನಿಲ್ ರವರು ಮಾಡುತ್ತಿದ್ದು ಇವರಿಂದ ಇತರರಿಗೂ ಪ್ರೇರಣೆಯಾಗಲಿ ಎಂದು ತಿಳಿಸುತ್ತಾ, ಅಧಿಕಾರಿಗಳ ಕೆಲಸಕ್ಕೆ ತಲೆಗೆ ಒತ್ತಡ ಇರುತ್ತದೆ ಆದರೆ ಪಂಚಾಯತಿಯ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರ ಕೆಲಸದಲ್ಲಿ ದೈಹಿಕ ಒತ್ತಡ ಇರುತ್ತದೆ. ನಿಮ್ಮಂತಹ ಸಿಬ್ಬಂದಿಗಳನ್ನು ಎಷ್ಟು ಹೊಗಳಿದರೂ ಸಾಲದು. ನಿಮ್ಮಂತಹವರನ್ನು ಆಯ್ಕೆ ಮಾಡಿ ಪರಿಕರಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಅನಿಲ್ ಮೆಡಿಕಲ್ಸ್ ನ ಮಾಲೀಕ ಅನಿಲ್, ಪಿಡಿಒ ಗಣೇಶ್, ಕಾರ್ಯದರ್ಶಿ ಪುರುಷೋತ್ತಮ್, ಆರೋಗ್ಯ ನಿರೀಕ್ಷಕ ಎಂ.ಆರ್. ಆನಂದಗೌಡ, ಪಂಚಾಯತಿಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.